ನವದೆಹಲಿ : ಮಧುರೆ ಸಮೀಪದ ತಿರುಪರನ್‌ಕುಂದ್ರಂ ಬೆಟ್ಟದ ದೀಪ ಸ್ತಂಭದಲ್ಲಿ ದೀಪ ಹಚ್ಚಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಸಿ.ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಜೂನ್ 11ರಂದು ಸರ್ಕಾರಿ ವಕೀಲ ಬಿ. ಕರುಣಾಕರನ್ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಹಿಂದಿನ ಡಿಎಂಕೆ ಸರ್ಕಾರ, ತಿರುಪರನ್‌ಕುಂದ್ರಂ ಬೆಟ್ಟದಲ್ಲಿರುವ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಆಡಳಿತ ಮಂಡಳಿ ಮತ್ತು ಹಜರತ್ ಸುಲ್ತಾನ್ ಸಿಕ್ಕಂದರ್ ಬಾದುಷಾ ಅವುಲಿಯಾ ದರ್ಗಾ ಜತೆಗೂಡಿ, ದೀಪ ಹಚ್ಚಲು ಅನುಮತಿ ನೀಡಿದ್ದ ಏಕಸದಸ್ಯ ಪೀಠದ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ದೀಪ ಹಚ್ಚಲು ಅವಕಾಶ ನೀಡುವುದು ಕೋಮು ಅಶಾಂತಿಗೆ ಕಾರಣ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿತ್ತು.
ಆದರೆ, 'ದೀಪ ಹಚ್ಚಲು ಅವಕಾಶ ನೀಡುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂಬ ರಾಜ್ಯ ಸರ್ಕಾರದ ಭಯವು ಹಾಸ್ಯಾಸ್ಪದ ಮತ್ತು ನಂಬಲು ಆಗುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಇರುವ ಆತಂಕವು, ರಾಜ್ಯ ಸರ್ಕಾರ ತನ್ನ ಅನುಕೂಲಕ್ಕಾಗಿ ತಾನೇ ಸೃಷ್ಟಿಸಿದ 'ಕಾಲ್ಪನಿಕ ಭೂತ' ಅಲ್ಲದೇ ಬೇರೇನೂ ಅಲ್ಲ' ಎಂದಿದ್ದ ಹೈಕೋರ್ಟ್, ದೀಪ ಹಚ್ಚಲು ಅನುಮತಿ ನೀಡಿ 2025ರ ಡಿಸೆಂಬರ್ 1ರಂದು ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು.
ತಿರುಪರನ್‌ಕುಂದ್ರಂ ಬೆಟ್ಟದ ದೀಪ ಸ್ತಂಭದಲ್ಲಿ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ದೀಪ ಹಚ್ಚಬಹುದು. ಬೆಟ್ಟದಲ್ಲಿ ದೀಪಸ್ತಂಭ ಇರುವ ಜಾಗವು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಸೇರಿದೆ ಎಂದು ಮದ್ರಾಸ್ ಹೈಕೋರ್ಟ್‌ನ ಮದುರೆ ಪೀಠವು ಜನವರಿ 6ರಂದು ತೀರ್ಪು ನೀಡಿತ್ತು.

