ನವದೆಹಲಿ: ನೀಟ್-ಯುಜಿ ಪರೀಕ್ಷಾ ಅಕ್ರಮವನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿಯು (ಸಿಜೆಪಿ) ಇಲ್ಲಿನ ಜಂತರ್ ಮಂತರ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲಿ 'ಉಚಿತ ಗ್ರಂಥಾಲಯ'ವನ್ನು ಸ್ಥಾಪಿಸಿದ್ದು, ಗಮನ ಸೆಳೆಯುತ್ತಿದೆ.
ದೆಹಲಿ ವಿಶ್ವವಿದ್ಯಾಲಯದ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟವು (ಎಐಎಸ್‌ಎಫ್) ಪ್ರತಿಭಟನಾ ಸ್ಥಳದ ಮೂಲೆಯೊಂದರಲ್ಲಿ ಗ್ರಂಥಾಲಯ ವನ್ನು ಸ್ಥಾಪಿಸಿದೆ.
ಸಿಜೆಪಿ ಬೆಂಬಲಿಗರು, ವಿದ್ಯಾರ್ಥಿಗಳು ತಮ್ಮ ಸಂಗ್ರಹದಲ್ಲಿದ್ದ ಸುಮಾರು 100 ಪುಸ್ತಕಗಳನ್ನು ಈ ಗ್ರಂಥಾಲಯಕ್ಕೆ ಕೊಡುಗೆ ನೀಡಿದ್ದಾರೆ.
ಗ್ರಂಥಾಲಯದ ಸುತ್ತಲೂ ಅನೇಕ ಪ್ರತಿಭಟನಕಾರರು ಜಮಾಯಿಸಿದ್ದು, ಜೀವನಚರಿತ್ರೆ, ಮಾನವಶಾಸ್ತ್ರ, ಇತಿಹಾಸ, ಕಾನೂನು ಹಾಗೂ ನಾಗರಿಕ ಹಕ್ಕುಗಳ ಕುರಿತ ಪುಸ್ತಕಗಳನ್ನು ಓದುವುದರಲ್ಲಿ ಮಗ್ನರಾಗಿದ್ದರು.
'ಶಿಕ್ಷಣದೊಂದಿಗೆ ಶಿಕ್ಷಣಕ್ಕಾಗಿ ಹೋರಾಟ' ಅಭಿಯಾನದ ಭಾಗವಾಗಿ ಗ್ರಂಥಾಲಯವನ್ನು ಸ್ಥಾಪಿಸಿದ್ದೇವೆ. ಈಪ್ರತಿಭಟನೆಯು ಇತರ ಪ್ರತಿಭಟನೆಗಳಿ ಗಿಂತ ಎಷ್ಟು ಭಿನ್ನವಾಗಿದೆ ಎಂಬುದನ್ನು ಇದು ತೋರಿಸುತ್ತದೆ' ಎಂದು ಎಐಎಸ್‌ಎಫ್ ಸದಸ್ಯ ದೇವಾಂಗ್ ಅನಿಕೇತ್ ತಿಳಿಸಿದ್ದಾರೆ.
'ಭ್ರಷ್ಟ ಶಿಕ್ಷಣ ವ್ಯವಸ್ಥೆಯ ವಿರುದ್ಧ ಹೋರಾಡಲು ಸಾಕ್ಷರತೆ ಮತ್ತು ಜಾಗೃತಿ ಮಾತ್ರ ಏಕೈಕ ಮಾರ್ಗವಾಗಿದೆ. ಈ ಪುಸ್ತಕಗಳು ನಮ್ಮ ನಾಗರಿಕ ಹಕ್ಕುಗಳು, ದೇಶದ ಇತಿಹಾಸ ಮತ್ತು ಅದರ ಪ್ರಸ್ತುತ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿವೆ' ಎಂದು ಹೇಳಿದ್ದಾರೆ.
'ಈ ಪುಸ್ತಕಗಳು ಶಾಂತಿಯುತ ಪ್ರತಿಭಟನೆಯನ್ನು ಬಿಂಬಿಸುತ್ತದೆ. ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದ ಅನೇಕ ಯುವಕರು ಇಲ್ಲಿರುವ ಕೃತಿಗಳನ್ನು ಓದುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
'ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು' ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿದೆ.

