ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತಿ ನೀರ್ಚಾಲು ವಾರ್ಡಿನ ಕನ್ನೆಪ್ಪಾಡಿ ಕರ್ಕಟಪಳ್ಳದಲ್ಲಿ ವಾಸಿಸುತ್ತಿರುವ ಚಂದ್ರಶೇಖರ ಸಿ.ಎಚ್. ಎಂಬವರು ಪ್ರಸ್ತುತ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರು ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅತ್ಯಂತ ಬಡ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದಾರೆ. ಪ್ರಸ್ತುತ ಕಾಯಿಲೆಯ ತೀವ್ರತೆಯಿಂದಾಗಿ ಇವರು ಯಾವುದೇ ಕೆಲಸ ಮಾಡಲು ಸಾಧ್ಯವಾಗದೆ ದಿನನಿತ್ಯ ಆಸ್ಪತ್ರೆಯ ದಾರಿಯನ್ನು ಹಿಡಿಯುವಂತಾಗಿದೆ.
ಚಂದ್ರಶೇಖರ ಅವರ ದಿನಗೂಲಿ ಆದಾಯದಿಂದಲೇ ಇಡೀ ಕುಟುಂಬ ಸಾಗುತ್ತಿತ್ತು. ಸದ್ಯ ಇವರ ಆದಾಯ ಸಂಪೂರ್ಣ ನಿಂತುಹೋಗಿದೆ. ಇವರಿಗೆ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳ ಶಿಕ್ಷಣ ಮತ್ತು ದೈನಂದಿನ ಜೀವನ ನಿರ್ವಹಣೆಗೆ ಸದ್ಯ ಯಾವುದೇ ದಾರಿಯಿಲ್ಲದಂತಾಗಿದೆ.
ಕ್ಯಾನ್ಸರ್‍ನಂತಹ ಗಂಭೀರ ಕಾಯಿಲೆಯ ಚಿಕಿತ್ಸೆಗೆ ಅತ್ಯಂತ ದುಬಾರಿ ವೆಚ್ಚ ತಗಲುತ್ತಿದ್ದು, ನಿರಂತರ ತಪಾಸಣೆ, ಔಷಧಗಳು ಮತ್ತು ಕೀಮೋಥೆರಪಿ/ರೇಡಿಯೇಶನ್ ಚಿಕಿತ್ಸೆಗಳ ಅಗತ್ಯವಿದೆ. ಕೂಲಿ ಕೆಲಸ ಮಾಡಿ ಬದುಕುವ ಈ ಕುಟುಂಬಕ್ಕೆ ನಿತ್ಯದ ಊಟಕ್ಕೇ ಪರದಾಡುವ ಪರಿಸ್ಥಿತಿ ಇರುವಾಗ, ಲಕ್ಷಾಂತರ ರೂ. ವೈದ್ಯಕೀಯ ವೆಚ್ಚವನ್ನು ಭರಿಸುವುದು ಅಸಾಧ್ಯದ ಮಾತಾಗಿದೆ. ಹಿರಿಯ ಪುತ್ರಿಯ ವಿವಾಹ ಇತ್ತೀಚೆಗಷ್ಟೆ ಕಳೆದಿತ್ತು. ದ್ವಿತೀಯ ಪುತ್ರಿ ಐಟಿಐ ಕಲಿಯುತ್ತದ್ದು, ಮತ್ತೋರ್ವಳು ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ಒಂದು ಕಡೆ ಕಾಯಿಲೆಯ ಭೀತಿ, ಇನ್ನೊಂದೆಡೆ ಮೂವರು ಹೆಣ್ಣು ಮಕ್ಕಳ ಭವಿಷ್ಯದ ಆತಂಕದಿಂದ ಈ ಕುಟುಂಬವು ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿದೆ. ಮಾನವೀಯತೆಯ ದೃಷ್ಟಿಯಿಂದ, ಸ್ಥಳೀಯಾಡಳಿತ, ಕಾರುಣ್ಯ ನಿಧಿಗಳು, ಜನಪ್ರತಿನಿಧಿಗಳು ಮತ್ತು ಸಹೃದಯಿ ಸಾರ್ವಜನಿಕರು ಚಂದ್ರಶೇಖರ ಸಿ.ಎಚ್. ಅವರಿಗೆ ಗರಿಷ್ಠ ಮಟ್ಟದ ಧನಸಹಾಯವನ್ನು ಒದಗಿಸಿ, ಅವರ ಜೀವ ಉಳಿಸಲು ಹಾಗೂ ಕುಟುಂಬಕ್ಕೆ ಆಸರೆಯಾಗಲು ಅತ್ಯಂತ ವಿನಮ್ರವಾಗಿ ವಿನಂತಿಸಿಕೊಳ್ಳಲಾಗುತ್ತಿದೆ.
ಸಹಾಯವನ್ನು ನೀಡುವ ದಾನಿಗಳು ಧನಸಹಾಯವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ನೀಡಬೇಕಾಗಿದೆ.
ಲೀಲಾವತಿ ಪಿ. (ಪತ್ನಿ), ಬ್ಯಾಂಕ್ ಖಾತೆ ಸಂಖ್ಯೆ 5322500101484901, ಐಎಫ್.ಎಸ್.ಸಿ : ಕೆಎಆರ್‍ಬಿ0000532, ಜಿಪೇ ಸಂಖ್ಯೆ : 9995176699




