ಪೆರ್ಲ: ಎಣ್ಮಕಜೆ ಪಂಚಾಯಿತಿಯ ಅತ್ಯಂತ ಕುಗ್ರಾಮವಾಗಿ ಗುರುತಿಸಿರುವ ಬಾಳೆಮೂಲೆ, ಒಡ್ಯ ಪ್ರದೇಶಕ್ಕೆ ಸಂಚರಿಸುವ ರಸ್ತೆ ಶೋಚನೀಯಾವಸ್ಥೆಯಲ್ಲಿದ್ದು, ಆರಂಭದ ಮಳೆಗೇ ವಾಹನ ಸಂಚಾರಕ್ಕೆ ಭಾರೀ ತೊಡಕುಂಟಾಗಿದೆ.
ಅಡ್ಕಸ್ಥಳದಿಂದ ಬಾಳೆಮೂಲೆ ಹಾದಿಯಾಗಿ ಒಡ್ಯ ಹಾಗೂ ಮುಂದೆ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಶೋಚನೀಯಾವಸ್ಥೆಯನ್ನು ಅಧಿಕಾರಿಗಳು ಕಂಡೂಕಾಣದಂತೆ ವರ್ತಿಸುತ್ತಿರುವುದರಿಂದ ಎಳೆಯ ಮಕ್ಕಳು ಸೇರಿದಂತೆ ಈ ಪ್ರದೇಶದ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಪ್ರಸಕ್ತ ರಸ್ತೆ ಅಡ್ಕಸ್ಥಳದಿಂದ ಮುಂದೆ ಬಾಳೆಮೂಲೆ ವರೆಗೂ ಕಾಡುಬೆಳೆದು ಸಂಚಾರ ದುಸ್ತರವೆನಿಸಿದೆ. ಈ ಹಾದಿಯಾಗಿ ಹತ್ತಕ್ಕೂ ಮಿಕ್ಕಿ ಶಾಲಾ ವಾಹನಗಳು ಸಂಚರಿಸುತ್ತಿದ್ದು, ಅಗಲಕಿರಿದಾದ ರಸ್ತೆಯಲ್ಲಿ ದಿನ ನಿತ್ಯ ಅಪಾಯಕರ ರೀತಿಯಲ್ಲೇ ಸಂಚಾರ ನಡೆಸಬೇಕಾಗುತ್ತಿದೆ. ಎಳೆಯ ಮಕ್ಕಳನ್ನು ಸಾಗಿಸುತ್ತಿರುವ ಶಾಲಾ ವಾಹನಗಳ ಸಂಚಾರಕ್ಕೆ ರಸ್ತೆ ಬದಿಯಲ್ಲಿನ ಕುರುಚಲು ಕಾಡಿನಿಂದ ಅಡಚಣೆಯಾಗುತ್ತಿದೆ. ಬಿರುಸಿನ ಮಳೆಗೆ ರಸ್ತೆ ಅಂಚಿನ ಮರಗಳು, ರೆಂಬೆಗಳು ಧರಾಶಾಯಿಯಾಗುತ್ತಿದ್ದು, ಇದರಿಂದ ಶಾಲಾ ಮಕ್ಕಳನ್ನು ಸಾಗಿಸುವುದು ಸೇರಿದಂತೆ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ.
ಕಾಡಿನಿಂದಾವೃತವಾಗಿರುವ ಪ್ರದೇಶ ಇದಾಗಿದ್ದು, ಮಳೆಗಾಲಕ್ಕೂ ಮುಂಚಿತವಾಗಿ ರಸ್ತೆ ಅಂಚಿನ ಪೊದೆ ಕಡಿದು ಶುಚೀಕರಿಸಲು ಲೋಕೋಪಯೋಗಿ ಇಲಾಖೆ ಮುಂದಾಗುತ್ತಿಲ್ಲ. ಬಾಳೆಮೂಲೆ ರಸ್ತೆಯ ಬಗ್ಗೆ ಇಲಾಖೆ ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯಿಂದ ಒಡ್ಯ ಭಾಗಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ತನ್ನ ಸಂಚಾರ ಸ್ಥಗಿತಗೊಳಿಸಿದೆ. ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಪ್ರಕಸತ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಸ್ಥಳೀಯ ನಾಗರಿಕರು ಹಾಗೂ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘವೂ ಆಘ್ರಹಿಸಿದೆ.



