ಕಾಸರಗೋಡು: ಕಳೆದ 100 ವರ್ಷಗಳಲ್ಲಿ ಸಂಘವು ನಿಶ್ಚಿತ ಹೆಜ್ಜೆಗಳಲ್ಲಿ ಸಾಗಿ ವಿಶಿಷ್ಟ ಪ್ರಯೋಗದ ಮೂಲಕ ನಾಗರೀಕತೆಯ ಸಂರಕ್ಷಣೆಯಲ್ಲಿ ಸಂಘ ಕೆಲಸ ಮಾಡಿದೆ ಎಂದು ಆರ್‍ಎಸ್‍ಎಸ್ ಸಹ ಸರಕಾರ್ಯವಾಹ್ ಮುಕುಂದ ಸಿ.ಆರ್. ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷಾಚರಣೆಯಂಗವಾಗಿ ಭಾನುವಾರ ಸಂಜೆ ಕಾಸರಗೋಡಿನ ಆರ್‍ಕೆ ಮಾಲ್‍ನ ಗ್ರಾಂಡೋರ್ ಆಡಿಟೋರಿಯಂನಲ್ಲಿ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಮೂಲ ಸನಾತನ ಮೌಲ್ಯಗಳು ಇದರ ಆಳವಾದ ಅಧ್ಯಯನವನ್ನು ಕಂಡುಕೊಂಡ ಚಿಂತಕರು ನಾಗರೀಕತೆಯನ್ನು ಹೇಗೆ ಸಂರಕ್ಷಿಸಬೇಕೆಂಬ ಜಾಗೃತಿ ಮೂಡಿಸುವಲ್ಲಿಯೂ, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದೊಂದಿಗೆ ಸಮಾಜ ಪರಿವರ್ತನೆಯ ಎಲ್ಲಾ ವಲಯದಲ್ಲೂ ಸಂಘ ಬದಲಾವಣೆ ತರುವಲ್ಲಿ ಕೆಲಸ ಮಾಡಿದೆ. ಸಮಾಜದಲ್ಲಿ ತಳಮಟ್ಟದಲ್ಲಿ ಆಗುವ ಬದಲಾವಣೆಯ ಸಂಕಲಿತ ರೂಪವೇ ಹಿಂದೂ ಸಮಾಜದ ಪರಿವರ್ತನೆಯಲ್ಲಿ ಪ್ರದಾನವಾಗಿದೆ. ರಾಷ್ಟ್ರದ ಬಗ್ಗೆ, ಸಮಾಜದ ಬಗ್ಗೆ ನಮಗಿರುವ ಭಾವನೆಯೇ ನಮ್ಮ ಮೂಲ ಬಂಡವಾಳವಾಗಿದೆ. ಪ್ರಬುದ್ಧರಾದ ಎಲ್ಲಾ ಬಂಧುಗಳು ಜೊತೆಯಾಗಿ ಪರಿವರ್ತನೆಗಾಗಿ ಸಮಾಜದ ಶಕ್ತಿಯಾಗಿ, ಸಾಮಾಜಿಕವಾಗಿ ನಾಗರೀಕತೆಯನ್ನು ಉಳಿಸುವ ಕೆಲಸದಲ್ಲಿ ಕೈಜೋಡಿಸಬೇಕೆಂದರು.
ಸಂವಾದದಲ್ಲಿ ಸಂಘದ ನೋಂದಣಿ ಹಾಗೂ ಹಣಕಾಸು ವ್ಯವಹಾರದ ಬಗಗೆ ಬರುವ ಟೀಕೆ ಬಗ್ಗೆ ಉತ್ತರಿಸಿ ಕಳೆದ 100 ವರ್ಷಗಳಲ್ಲಿ ಸಂಘವು ಯಾರ ಮುಂದೆಯೂ ಸಹಾಯಕ್ಕಾಗಿ ಕೈ ಚಾಚಿಲ್ಲ, ಗುರುದಕ್ಷಿಣೆಯಾಗಿ ಲಭಿಸುವ ಸಮರ್ಪಣೆಯೇ ಪ್ರಧಾನ ಆದಾಯವಾಗಿದೆ. ಸಮಾಜದ ಮಾಹಾಪಿಡಗು ಮಾದಕ ವಸ್ತುಗಳ ಬಳಕೆಯನ್ನು ಅಳಿಸಿ ಹಾಕುವಲ್ಲಿ ಸಮಾಜವು ಜೊತೆಯಾಗಿ ಪ್ರಯತ್ನಿಸಬೇಕು ಎಂದರು.
ಪ್ರಬುದ್ಧ ಭಾರತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ವಲಯದ ಆಹ್ವಾನಿತರಾದ ಪ್ರಬುದ್ಧರು ಭಾಗವಹಿಸಿದರು. ಕಣ್ಣೂರು ವಿಭಾಗ್ ಸಂಘಚಾಲಕ್ ನ್ಯಾಯವಾದಿ ಸಿ.ಕೆ.ಶ್ರೀನಿವಾಸನ್, ಜಿಲ್ಲಾ ಕಾರ್ಯವಾಹ್ ಪ್ರಭಾಕರನ್ ಮಾಸ್ತರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.




