ನವದೆಹಲಿ: ಜೂನ್ 21ಕ್ಕೆ ನಿಗದಿಯಾಗಿರುವ 'ನೀಟ್-ಯುಜಿ' 2026ರ ಮರುಪರೀಕ್ಷೆಯನ್ನು ಕಂಪ್ಯೂಟರ್ ಮೂಲಕ (ಕಂಪ್ಯೂಟರ್ ಬೇಸ್ಡ್ ಟೆಸ್ಟ್- ಸಿಬಿಟಿ) ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ತಕ್ಷಣ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅರವಿಂದ ಕುಮಾರ್ ಅವರ ಪೀಠವು, ಈ ವಿಷಯದ ತ್ವರಿತ ವಿಚಾರಣೆಗೆ ಒಲವು ತೋರುವುದಿಲ್ಲ ಎಂದು ಸ್ಪಷ್ಟಪಡಿಸಿತು. ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲ ಸತ್ಯಂ ಸಿಂಗ್ ಅವರು ಪರೀಕ್ಷೆಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಬೇಕು ಎಂದು ಪೀಠವನ್ನು ಒತ್ತಾಯಿಸಿದರು.
ಇದೇ ರೀತಿಯ ಅರ್ಜಿಗಳನ್ನು ಈಗಾಗಲೇ ವಜಾಗೊಳಿಸಲಾಗಿದೆ ಎಂದು ಹೇಳಿದ ನ್ಯಾಯಮೂರ್ತಿ ನರಸಿಂಹ, 'ನೀಟ್-ಯುಜಿ' ಮರುಪರೀಕ್ಷೆ ನಡೆಸಲು ಇರುವ ಸವಾಲುಗಳನ್ನು ಎತ್ತಿ ತೋರಿಸಿದರು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಲ್ಲಿನ (ಎನ್‌ಟಿಎ) ಸುಧಾರಣೆಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳೊಂದಿಗೆ ಈ ಅರ್ಜಿಯನ್ನು ಜುಲೈನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠವು ಹೇಳಿತು.
ಮುಂದಿನ ವರ್ಷದಿಂದ (2027) 'ನೀಟ್-ಯುಜಿ'ಗೆ ಕಂಪ್ಯೂಟರ್ ಮೂಲಕ ಪರೀಕ್ಷೆ ನಡೆಸಲು ಸಿದ್ಧವಾಗಿರುವುದಾಗಿ ಎನ್‌ಟಿಎ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

