HEALTH TIPS

NEET: ತಿಂಗಳಿಡೀ ಕಾಯಿಸಿ 2 ನಿಮಿಷ ತಡವಾಯಿತೆಂದು ಪರೀಕ್ಷೆ ಅವಕಾಶ ನಿರಾಕರಿಸಿದ NTA

ನವದೆಹಲಿ:‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಟ್ ಮರುಪರೀಕ್ಷೆ ಮೂಲಕ ವಿದ್ಯಾರ್ಥಿಗಳಿಗೆ ಎರಡನೇ ಅವಕಾಶ ನೀಡಿತ್ತು. ಆದರೆ, ಮಳೆ, ಸಂಚಾರ ದಟ್ಟಣೆ, ಅಪಘಾತ ಅಥವಾ ತಾಂತ್ರಿಕ ಗೊಂದಲಗಳಿಂದಾಗಿ ಕೇವಲ ಎರಡೇ ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಮಾತ್ರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ವ್ಯವಸ್ಥೆ ಎರಡನೇ ಅವಕಾಶ ನೀಡಲೇ ಇಲ್ಲ.

ದೇಶದಾದ್ಯಂತ ಸುಮಾರು 23 ಲಕ್ಷ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳು ಕಳೆದೊಂದು ತಿಂಗಳಿನಿಂದ ಅತಂತ್ರ ಸ್ಥಿತಿಯಲ್ಲಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದಾಗಿ, ಈಗಾಗಲೇ ಓದಿ ಮುಗಿಸಿದ್ದ ಪುಸ್ತಕಗಳನ್ನು ವಿದ್ಯಾರ್ಥಿಗಳು ಮತ್ತೆ ಕೈಗೆತ್ತಿಕೊಳ್ಳಬೇಕಾಯಿತು. ತೀವ್ರ ಆತಂಕದ ನಡುವೆಯೇ ದೇಶದ ಅತ್ಯಂತ ಕಠಿಣ ಪರೀಕ್ಷೆಗೆ ಮತ್ತೊಮ್ಮೆ ಸಜ್ಜಾಗಬೇಕಾಯಿತು. ಶನಿವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ತಪ್ಪು ತಿದ್ದಿಕೊಳ್ಳಲು ಅವಕಾಶ ಸಿಕ್ಕಿತಾದರೂ, ಹಲವು ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷಾ ಕೇಂದ್ರದ ಬಾಗಿಲುಗಳು ಶಾಶ್ವತವಾಗಿ ಮುಚ್ಚಿದ್ದವು.

ದೇಶದಾದ್ಯಂತ ಒಟ್ಟು 5,400ಕ್ಕೂ ಹೆಚ್ಚು ಕೇಂದ್ರಗಳಲ್ಲಿ 22.7 ಲಕ್ಷ ಅಭ್ಯರ್ಥಿಗಳಿಗೆ ಅತ್ಯಂತ ಕಟ್ಟುನಿಟ್ಟಿನ ಭದ್ರತೆಯಲ್ಲಿ ಮರುಪರೀಕ್ಷೆ ನಡೆಸಲಾಯಿತು. ಕೃತಕ ಬುದ್ಧಿಮತ್ತೆ (AI) ಆಧಾರಿತ ಕಣ್ಗಾವಲು, ಬಯೋಮೆಟ್ರಿಕ್ ಪರಿಶೀಲನೆ, ಸಿಸಿಟಿವಿ ಸೇರಿದಂತೆ 1.38 ಲಕ್ಷಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಬಳಸಲಾಗಿತ್ತು. ಆದರೆ, ಸಂಜೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದ್ದು ಈ ಹೈಟೆಕ್ ಭದ್ರತೆಯ ಬಗ್ಗೆ ಅಲ್ಲ. ಬದಲಿಗೆ ಮುಚ್ಚಿದ ಗೇಟ್‌ಗಳ ಮುಂದೆ ಕಣ್ಣೀರು ಹಾಕುತ್ತಾ ನಿಂತಿದ್ದ ವಿದ್ಯಾರ್ಥಿಗಳ ಬಗ್ಗೆ.

ಮಧ್ಯಾಹ್ನ 1:30ಕ್ಕೆ ಗೇಟ್ ಮುಚ್ಚಿದ ಕೆಲವೇ ನಿಮಿಷಗಳಲ್ಲಿ ಬಂದ ಕಾರಣಕ್ಕೆ ವಿದ್ಯಾರ್ಥಿಗಳನ್ನು ಹೊರಗಟ್ಟಲಾದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ತಿಂಗಳಿಡೀ ಕಾಯಿಸಿದ ಪರೀಕ್ಷಾ ಮಂಡಳಿ, ವಿದ್ಯಾರ್ಥಿಗಳಿಗಾಗಿ ಕೇವಲ ಎರಡು ನಿಮಿಷ ಕಾಯಲು ಸಾಧ್ಯವಿರಲಿಲ್ಲವೇ? ಎಂಬ ಆಕ್ರೋಶ ಪೋಷಕರಿಂದ ಕೇಳಿಬಂದಿದೆ.

ಹೃದಯ ಕರಗಿಸಿದ ವಿದಿಶಾ ‌ವಿಡಿಯೊ

ಮಧ್ಯಪ್ರದೇಶದ ವಿದಿಶಾದಲ್ಲಿ ಭಾರಿ ಮಳೆ ಮತ್ತು ಬೈಕ್ ಕೆಟ್ಟು ಹೋದ ಕಾರಣ ವಿದ್ಯಾರ್ಥಿನಿಯೊಬ್ಬಳು ನಿಗದಿಗಿಂತ ಸಮಯಕ್ಕೆ ಕೇಂದ್ರಕ್ಕೆ ಬರಲಾಗದೆ, ಎರಡು ನಿಮಿಷ ತಡವಾಗಿತ್ತು. ಆಕೆಯ ತಂದೆ ಗೇಟ್ ಮುಂದೆ ಅಳುತ್ತಾ ಅಧಿಕಾರಿಗಳ ಕೈಕಾಲು ಹಿಡಿದರು. ಕೊನೆಗೆ ನೋಡಲ್ ಅಧಿಕಾರಿಯ ಮಧ್ಯಸ್ಥಿಕೆಯಿಂದ ಆಕೆಯನ್ನು ಒಳಗೆ ಬಿಡಲಾಯಿತಾದರೂ, ಅಷ್ಟರಲ್ಲೇ ಕಂಪ್ಯೂಟರ್ ಸಿಸ್ಟಮ್ ಲಾಕ್ ಆಗಿದ್ದರಿಂದ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳ್ಳದೆ ಆಕೆ ಪರೀಕ್ಷೆ ಬರೆಯಲಾಗಲಿಲ್ಲ. ಅದೇ ಕೇಂದ್ರದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಹಳೆಯ ಹಾಲ್ ಟಿಕೆಟ್ ತಂದಿದ್ದಕ್ಕೆ ಹಾಗೂ ಮಗದೊಬ್ಬ ತಡವಾಗಿ ಬಂದಿದ್ದಕ್ಕೆ ಪರೀಕ್ಷೆಯಿಂದ ವಂಚಿತರಾದರು.

ತೆಲಂಗಾಣದ ಜಗತ್ಯಾಲ ಜಿಲ್ಲೆಯ ಪರೀಕ್ಷಾ ಕೇಂದ್ರದ ಮುಂದೆ ತಾಯಿಯೊಬ್ಬಳು ಸೆಕ್ಯೂರಿಟಿ ಸಿಬ್ಬಂದಿಯ ಕಾಲಿಗೆ ಬಿದ್ದು, 'ನನ್ನ ಮಗಳನ್ನು ಒಳಗೆ ಬಿಡಿ' ಎಂದು ಗೋಳಾಡಿದ ದೃಶ್ಯ ಮನ ಕಲಕುವಂತಿತ್ತು.

ಇನ್ನು ಮತ್ತೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ಹಾಲ್ ಟಿಕೆಟ್‌ನಲ್ಲಿದ್ದ ಕೇಂದ್ರಕ್ಕೆ ಹೋದಾಗ ಮೊದಲು ಪ್ರವೇಶ ನೀಡಲಾಗಿತ್ತು. ಆದರೆ 10 ನಿಮಿಷಗಳ ನಂತರ ಆಕೆಗೆ ಮತ್ತೊಮ್ಮೆ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲು ತಿಳಿಸಲಾಯಿತು. ಆಗ ಪರೀಕ್ಷಾ ಕೇಂದ್ರ ಬದಲಾಗಿರುವುದು ಗೊತ್ತಾಯಿತು. ಆಕೆ ಹೊಸ ಕೇಂದ್ರಕ್ಕೆ ತಲುಪುವಾಗ 1:30 ದಾಟಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ.

ದಾರಿ ತಪ್ಪಿಸಿದ ಗೂಗಲ್ ಮ್ಯಾಪ್

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಹಲವು ವಿದ್ಯಾರ್ಥಿಗಳನ್ನು ಗೂಗಲ್ ಮ್ಯಾಪ್ ತಪ್ಪು ದಾರಿಗೆ ಕರೆದೊಯ್ದಿದ್ದರಿಂದ ಅವರು ನಿಗದಿತ ಆರ್‌ಎನ್ ಇಂಟರ್ ಕಾಲೇಜ್ ಕೇಂದ್ರವನ್ನು ಸಮಯಕ್ಕೆ ಸರಿಯಾಗಿ ತಲುಪಲಾಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಭೋಪಾಲ್‌ನಲ್ಲಿ ಅಪಘಾತಕ್ಕೀಡಾಗಿ ರಕ್ತಸಿಕ್ತವಾಗಿ ಬಂದ ವಿದ್ಯಾರ್ಥಿಗೂ ಪ್ರವೇಶ ನಿರಾಕರಿಸಲಾಗಿದೆ.

ಬೆಂಗಳೂರಿನಲ್ಲಿ ಗೇಟ್ ಹತ್ತಿ ಜಿಗಿದ ವಿದ್ಯಾರ್ಥಿನಿಯರು

ಬೆಂಗಳೂರಿನ ಸರ್ಕಾರಿ ರಾಮನಾರಾಯಣ ಚೆಲ್ಲಾರಾಂ (ಆರ್‌ಸಿ) ಕಾಲೇಜು ಕೇಂದ್ರದಲ್ಲಿ ಸಮಯ ಮೀರಿದ ನಂತರ ಬಂದ ಮೂವರು ವಿದ್ಯಾರ್ಥಿನಿಯರು ಕಾಲೇಜಿನ ಮುಖ್ಯ ಗೇಟ್ ಹತ್ತಿ ಒಳಗೆ ಜಿಗಿದ ದೃಶ್ಯಗಳು ಹರಿದಾಡುತ್ತಿವೆ. ರಾಜಕೀಯ ಸಮಾವೇಶ ಮತ್ತು ಟ್ರಾಫಿಕ್ ಜಾಮ್‌ನಿಂದಾಗಿ ತಡವಾಯಿತು ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಆದರೆ ಒಳಗಿನ ಗೇಟ್ ಲಾಕ್ ಆಗಿದ್ದರಿಂದ ಆ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಾಗದೆ ಗೇಟ್ ಹೊರಗೆ ಕುಳಿತು ಜೋರಾಗಿ ಅಳುತ್ತಿರುವ ವಿಡಿಯೊ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂಬೈನ ಪರೇಲ್ ಕೇಂದ್ರದಲ್ಲೂ ಇಂಥದ್ದೇ ದೃಶ್ಯ ಕಂಡುಬಂದಿದ್ದು, ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಈ ಕಠಿಣ ನಿಯಮಗಳವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 'ಸಿಬಿಎಸ್‌ಇ ಅಥವಾ ಐಸಿಎಸ್‌ಇ ಬೋರ್ಡ್ ಪರೀಕ್ಷೆಗಳಲ್ಲೇ 15 ನಿಮಿಷ ತಡವಾಗಿ ಬಂದರೂ ಮಾನವೀಯತೆಯ ಆಧಾರದ ಮೇಲೆ ಅವಕಾಶ ನೀಡಲಾಗುತ್ತದೆ. ಆದರೆ ನೀಟ್‌ನ ಈ ಕ್ರೂರ ನಿಯಮಗಳು ವಿದ್ಯಾರ್ಥಿಗಳನ್ನು ತೀವ್ರ ಮಾನಸಿಕ ಒತ್ತಡಕ್ಕೆ ತಳ್ಳುತ್ತಿವೆ' ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ಮತ್ತೊಬ್ಬ ಬಳಕೆದಾರರು, '22 ಲಕ್ಷ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯುವಂತೆ ಮಾಡಿದ ಶಿಕ್ಷಣ ಸಚಿವರು ಮತ್ತು ಎನ್‌ಟಿಎ ಮಂಡಳಿಗೆ ಪೇಪರ್ ಲೀಕ್ ತಡೆಯಲು ತಡವಾಗಬಹುದು. ಆದರೆ ವಿದ್ಯಾರ್ಥಿ 2 ನಿಮಿಷ ತಡವಾಗಿ ಬಂದರೆ ವರ್ಷವೇ ನಷ್ಟವಾಗಬೇಕೇ? ಶಿಸ್ತು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವೇ, ಮಂತ್ರಿಗಳಿಗಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

ಇನ್ನು ಮತ್ತೊಬ್ಬ ಬಳಕೆದಾರರು, 'ಪರೀಕ್ಷೆಯ ನಿಯಮಗಳನ್ನು ಮೊದಲೇ ತಿಳಿಸಲಾಗಿರುತ್ತದೆ. ಟ್ರಾಫಿಕ್, ಮಳೆ ಏನೇ ಇದ್ದರೂ ಮುಂಚಿತವಾಗಿ ತಲುಪುವುದು ವಿದ್ಯಾರ್ಥಿಗಳ ಜವಾಬ್ದಾರಿ' ಎಂದು ಕಟ್ಟುನಿಟ್ಟಿನ ನಿಯಮಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries