ಪುಣೆ: 'ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ನಿಯಮಗಳಿಗೆ ತರಲಾದ ತಿದ್ದುಪಡಿಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ತಕ್ಷಣವೇ ಹಿಂಪಡೆಯದಿದ್ದರೆ, ಜುಲೈ 5ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೇನೆ' ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಸಿದ್ದಾರೆ.
ಈ ಕುರಿತು ಅಣ್ಣಾ ಹಜಾರೆ ಅವರು ದೇವೇಂದ್ರ ಫಡಣವೀಸ್ ಅವರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಮಾಹಿತಿ ಹಕ್ಕು ನಿಯಮಗಳು-2026, ಆರ್‌ಟಿಐ ಕಾಯ್ದೆಯ ಮೂಲ ಉದ್ದೇಶವನ್ನು ಮೊಟಕುಗೊಳಿಸುತ್ತದೆ ಮತ್ತು ಜನರನ್ನು ಮಾಹಿತಿಯಿಂದ ದೂರ ಇಡುತ್ತದೆ. ಜೂನ್ 12ರಂದು ಮಾಡಲಾದ ತಿದ್ದುಪಡಿಗಳು ಮಾಹಿತಿ ಹಕ್ಕು ಕಾಯ್ದೆ-2005ರ ಆಶಯವನ್ನು ಉಲ್ಲಂಘಿಸುತ್ತವೆ ಮತ್ತು ಪಾರದರ್ಶಕತೆಗೆ ಧಕ್ಕೆ ತರುತ್ತವೆ ಎಂದು ಹಜಾರೆ ಪ್ರತಿಪಾದಿಸಿದ್ದಾರೆ.
ಶುಲ್ಕದ ಹೆಚ್ಚಳವನ್ನು ಬಲವಾಗಿ ಆಕ್ಷೇಪಿಸಿರುವ ಹಜಾರೆ, ಇದಕ್ಕೆ ಯಾವುದೇ ತರ್ಕಬದ್ಧ ವಿವರಣೆ ಅಥವಾ ಆರ್ಥಿಕ ವಿಶ್ಲೇಷಣೆಯನ್ನು ಸರ್ಕಾರ ನೀಡಿಲ್ಲ ಎಂದು ಹೇಳಿದ್ದಾರೆ.
'ಆರ್‌ಟಿಐ ಎನ್ನುವುದು ಆದಾಯ ಗಳಿಸುವ ಕಾನೂನು ಅಲ್ಲ. 20 ವರ್ಷಗಳ ನಂತರ ಶುಲ್ಕವನ್ನು ಹೆಚ್ಚಿಸುವುದಾದರೆ, ಮಾಹಿತಿ ನೀಡಲು ನಿರಾಕರಿಸುವ ಅಧಿಕಾರಿಗಳ ಮೇಲಿನ ದಂಡವನ್ನೂ ಹೆಚ್ಚಿಸಬೇಕು' ಎಂದು ಹಜಾರೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿದಾರರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸುವುದನ್ನು ವಿರೋಧಿಸಿರುವ ಅವರು, ಆರ್‌ಟಿಐ ಕಾಯ್ದೆಯ ಸೆಕ್ಷನ್ 6(2) ರ ಪ್ರಕಾರ ಅರ್ಜಿದಾರರು ತಮ್ಮ ವೈಯಕ್ತಿಕ ವಿವರ ಅಥವಾ ಮಾಹಿತಿ ಕೇಳಲು ಇರುವ ಕಾರಣಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ. ಇಂತಹ ನಿಯಮವು ಭ್ರಷ್ಟಾಚಾರ ಬಹಿರಂಗಪಡಿಸುವವರು ಮತ್ತು ಸಾಮಾಜಿಕ ಹೋರಾಟಗಾರರ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತದೆ ಎಂದು ಹಜಾರೆ ಆತಂಕ ವ್ಯಕ್ತಪಡಿಸಿದ್ದಾರೆ.
ಹಜಾರೆ ಅವರು 'ಒಂದು ವಿಷಯ, ಒಂದು ಅರ್ಜಿ' ನಿಯಮವನ್ನು ಸಹ ಟೀಕಿಸಿದ್ದು, ಇದು ಅನಗತ್ಯ ಮತ್ತು ಹೊರೆಯಾಗಿದೆ ಎಂದಿದ್ದಾರೆ. ಅಲ್ಲದೆ, ಪುನರಾವರ್ತಿತ ಅರ್ಜಿಗಳನ್ನು ತಕ್ಷಣವೇ ವಜಾಗೊಳಿಸುವ ನಿಬಂಧನೆಯು ಸಂಪೂರ್ಣ ಅಥವಾ ನವೀಕೃತ ಮಾಹಿತಿ ಪಡೆಯುವುದನ್ನು ತಡೆಯುತ್ತದೆ ಎಂದು ಹೇಳಿದ್ದಾರೆ.
ಮಾಹಿತಿ ಕೇಳುವ ಅರ್ಜಿದಾರರ ಉದ್ದೇಶವನ್ನು ಪ್ರಶ್ನಿಸುವುದು, ಪ್ರತಿಕ್ರಿಯಿಸದಿದ್ದರೆ ಮೇಲ್ಮನವಿಗಳನ್ನು ವಜಾಗೊಳಿಸುವುದು, ಅರ್ಜಿದಾರರ ಮರಣದ ನಂತರ ಪ್ರಕರಣಗಳನ್ನು ಸ್ವಯಂಚಾಲಿತವಾಗಿ ಮುಚ್ಚುವುದು ಮತ್ತು ಮಾಹಿತಿ ಆಯೋಗದ ಮುಂದೆ ವಿಚಾರಣೆಯ ಸಮಯದಲ್ಲಿ ಕಾನೂನು ನೆರವು ಪಡೆಯುವುದನ್ನು ನಿಷೇಧಿಸುವುದು ಸೇರಿದಂತೆ ಸರ್ಕಾರದ ಇತರ ನಿಯಮಗಳಿಗೂ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವ್ಯವಸ್ಥೆಯ ವೈಫಲ್ಯಗಳನ್ನು ಸರಿಪಡಿಸುವ ಬದಲು, ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಸಾರ್ವಜನಿಕರ ಮೇಲೆಯೇ ಹೆಚ್ಚಿನ ಹೊರೆ ಹೊರಿಸುವಂತಾಗಿದೆ ಎಂದು ಹಜಾರೆ ಹೇಳಿದ್ದಾರೆ. ಸಾರ್ವಜನಿಕ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಕಡ್ಡಾಯಗೊಳಿಸುವ ಆರ್‌ಟಿಐ ಕಾಯ್ದೆಯ ಸೆಕ್ಷನ್ 4 ಇನ್ನೂ ಸರಿಯಾಗಿ ಜಾರಿಯಾಗಿಲ್ಲ, ಇದರಿಂದಾಗಿ ಜನರು ಅರ್ಜಿಗಳನ್ನು ಸಲ್ಲಿಸುವಂತಾಗಿದೆ ಎಂದು ಅವರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.
'ಪ್ರಕ್ರಿಯೆಯನ್ನು ಹೆಚ್ಚು ತಾಂತ್ರಿಕ, ದುಬಾರಿ ಮತ್ತು ಆಡಳಿತ ಕೇಂದ್ರಿತ ಮಾಡುವುದರಿಂದ ಪಾರದರ್ಶಕತೆ ಕಡಿಮೆಯಾಗುತ್ತದೆ. ಸಾರ್ವಜನಿಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಈ ತಿದ್ದುಪಡಿಗಳನ್ನು ತರಲಾಗಿದೆ' ಎಂದೂ ದೂರಿದ್ದಾರೆ.
ಹಜಾರೆ ಅವರು 1998ರಿಂದ ಮಹಾರಾಷ್ಟ್ರದಲ್ಲಿ ಆರ್‌ಟಿಐಗಾಗಿ ಹಲವು ಚಳವಳಿಗಳನ್ನು ಮುನ್ನಡೆಸಿದ್ದರು. ಮುಂಬೈ, ಅಹಿಲ್ಯಾನಗರ ಜಿಲ್ಲೆಯ ರೇಗನ್ ಸಿದ್ಧಿ ಹಾಗೂ ಪುಣೆಯ ಆಳಂದಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.
'ಜೂನ್ 12ರ ತಿದ್ದುಪಡಿಗಳನ್ನು ತಕ್ಷಣವೇ ರದ್ದುಗೊಳಿಸದಿದ್ದರೆ, ಜುಲೈ 5ರಿಂದ ರೇಗನ್ ಸಿದ್ಧಿಯ ಯಾದವ್ ಬಾಬಾ ದೇವಸ್ಥಾನದಲ್ಲಿ ನನ್ನ ಪ್ರಾಣ ಹೋದರೂ ಸರಿ... ನಾನು ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೇನೆ. ನಾನು ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ' ಎಂದು ಹಜಾರೆ ಸ್ಪಷ್ಟಪಡಿಸಿದ್ದಾರೆ.
ಅರ್ಜಿದಾರರ ಮೇಲೆ ಹೊಸ ನಿರ್ಬಂಧಗಳನ್ನು ಹೇರುವ ಬದಲು, ಸರ್ಕಾರವು ಈ ನಿಯಮಗಳನ್ನು ಹಿಂಪಡೆದು, ಸ್ವಯಂಪ್ರೇರಿತ ಮಾಹಿತಿ ಬಹಿರಂಗಪಡಿಸುವಿಕೆಯನ್ನು ಬಲಪಡಿಸಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.

