ನವದೆಹಲಿ: ಒಡಿಶಾದ ಧೆಂಕನಾಲ್ ಜಿಲ್ಲೆಯ 17 ವರ್ಷದ ಬುಡಕಟ್ಟು ಬಾಲಕಿಯನ್ನು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಎರಡು ವರ್ಷಗಳ ಕಾಲ ಮಾನವ ಕಳ್ಳಸಾಗಣೆ ಮಾಡಿ, ಮಾರಾಟ ಮಾಡಿ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಲಾಗಿದೆ ಎಂಬ ಮಾಧ್ಯಮ ವರದಿಯ ಆಧಾರದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಓಊಖಅ) ಒಡಿಶಾ ಮತ್ತು ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
'ಉದ್ಯೋಗ ನೀಡುವ ನೆಪದಲ್ಲಿ ಸಂತ್ರಸ್ತೆ ಮತ್ತು ಇತರ ಮೂವರು ಬಾಲಕಿಯರನ್ನು ಉತ್ತರ ಪ್ರದೇಶಕ್ಕೆ ಕಳ್ಳಸಾಗಣೆ ಮಾಡಲಾಗಿದೆ' ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಿಳಿಸಿದೆ.
ಸ್ಥಳೀಯ ವಕೀಲರೊಬ್ಬರ ನೆರವಿನಿಂದ ಬಾಲಕಿ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಝಾನ್ಸಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದ್ದರೂ, ಒಡಿಶಾಕ್ಕೆ ತೆರಳಲು ರೈಲು ಟಿಕೆಟ್ ಒದಗಿಸಿರುವುದನ್ನು ಹೊರತುಪಡಿಸಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆಕೆ ಹಿಂದಿರುಗಿದ ಬಳಿಕ ಒಡಿಶಾ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಅದು ಹೇಳಿದೆ.
ಒಡಿಶಾದ ಧೆಂಕನಾಲ್ ಜಿಲ್ಲೆಯ ಕಂಕಡಹಡ ಪ್ರದೇಶದ 17 ವರ್ಷದ ಬುಡಕಟ್ಟು ಬಾಲಕಿಯನ್ನು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಕಳ್ಳಸಾಗಣೆ ಮಾಡಿ, ಮಾರಾಟ ಮಾಡಲಾಗಿದೆ. ಅಲ್ಲದೆ, ನಿರಂತರ ದೌರ್ಜನ್ಯಕ್ಕೆ ಒಳಪಡಿಸಲಾಗಿದೆ ಎಂಬ ಮಾಧ್ಯಮ ವರದಿಯನ್ನು ಆಯೋಗ ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿದೆ ಎಂದು ಓಊಖಅ ತಿಳಿಸಿದೆ.
ವರದಿಯ ಅಂಶಗಳು ನಿಜವಾಗಿದ್ದರೆ, ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಆದ್ದರಿಂದ ಒಡಿಶಾ ಮತ್ತು ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಧೆಂಕನಾಲ್ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಎರಡು ವಾರಗಳಲ್ಲಿ ಈ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಕೋರಲಾಗಿದೆ.
ಇದರಲ್ಲಿ ತನಿಖೆಯ ಸ್ಥಿತಿಗತಿ ಹಾಗೂ ಸಂತ್ರಸ್ತೆಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಕೈಗೊಂಡ ಕ್ರಮಗಳ ವಿವರಗಳು ಇರಬೇಕೆಂದು ಆಯೋಗ ತಿಳಿಸಿದೆ.
ಮೇ 29ರಂದು ಪ್ರಕಟವಾದ ಮಾಧ್ಯಮ ವರದಿಯ ಪ್ರಕಾರ, ಸಂತ್ರಸ್ತೆಯನ್ನು ಸುಮಾರು ಮೂರು ತಿಂಗಳ ಕಾಲ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಅಲ್ಲಿ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಸಂತ್ರಸ್ತೆ ಗರ್ಭಿಣಿಯಾದಾಗ, ಆಕೆಯ ಒಪ್ಪಿಗೆಯಿಲ್ಲದೆ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿತ್ತು.
ಅನಂತರ ಆಕೆಯನ್ನು ಮತ್ತೊಬ್ಬ ವ್ಯಕ್ತಿಗೆ 50 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಆಕೆ ಅಲ್ಲಿಂದ ತಪ್ಪಿಸಿಕೊಳ್ಳುವ ಮುನ್ನ ಸುಮಾರು ಎರಡು ವರ್ಷಗಳ ಕಾಲ ಇತರ ಹಲವರಿಂದ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು ಎಂದು ವರದಿ ಹೇಳಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

