ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ರೆಪೊ ದರವನ್ನು ಶೇಕಡಾ 5.25 ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಕಚ್ಚಾ ತೈಲ ಬೆಲೆ ಏರಿಕೆ, ಪೂರೈಕೆ ಸರಪಳಿ ವ್ಯತ್ಯಯ ಹಾಗೂ ಜಾಗತಿಕ ರಾಜಕೀಯ ಉದ್ವಿಗ್ನತೆಯು ದೇಶದ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಬೀರುವ ಪರಿಣಾಮಗಳ ಕುರಿತು ಮತ್ತಷ್ಟು ಸ್ಪಷ್ಟತೆಗಾಗಿ ಕಾಯಲು ಬ್ಯಾಂಕ್ ನಿರ್ಧರಿಸಿದೆ.
ಆರ್ಥಿಕ ತಜ್ಞರು ಆರ್‌ಬಿಐನ ಈ ನಿರ್ಧಾರವನ್ನು ಮೊದಲೇ ನಿರೀಕ್ಷಿಸಿದ್ದರು.
ವಿತ್ತೀಯ ನೀತಿ ಸಮಿತಿಯ ಎಲ್ಲಾ ಆರೂ ಸದಸ್ಯರು ರೆಪೊ ದರವನ್ನು ಶೇಕಡಾ 5.25 ರಲ್ಲೇ ಮುಂದುವರಿಸಲು ಸರ್ವಾನುಮತದಿಂದ ಮತ ಚಲಾಯಿಸಿದರು. ಕೇಂದ್ರ ಬ್ಯಾಂಕ್ ತನ್ನ ನೀತಿಯನ್ನು "ತಟಸ್ಥ"ನಿಲುವಿನಲ್ಲೇ ಉಳಿಸಿಕೊಂಡಿದ್ದು, ಮುಂದಿನ ನಿರ್ಧಾರಗಳು ಇನ್ನು ಮುಂದೆ ಬರುವ ಆರ್ಥಿಕ ದತ್ತಾಂಶಗಳು ಮತ್ತು ಜಾಗತಿಕ ವಿದ್ಯಮಾನಗಳ ಬೆಳವಣಿಗೆಯನ್ನು ಅವಲಂಬಿಸಿರುತ್ತವೆ ಎಂದು ಸೂಚಿಸಿದೆ.
ಈ ನಿರ್ಧಾರವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಕೇಂದ್ರ ಬ್ಯಾಂಕ್ ಎಪ್ರಿಲ್‌ನಲ್ಲಿ ನಡೆಸಿದ್ದ ಹಿಂದಿನ ನೀತಿ ಪರಾಮರ್ಶೆಗೆ ಹೋಲಿಸಿದರೆ ಜಾಗತಿಕ ಪರಿಸರವು ಈಗ ಮತ್ತಷ್ಟು ಸವಾಲಿನಿಂದ ಕೂಡಿದೆ ಎಂದು ಹೇಳಿದರು.
"ಕಳೆದ ಎಪ್ರಿಲ್‌ನ ನೀತಿ ಪರಿಶೀಲನಾ ಸಭೆಯ ನಂತರ ಜಾಗತಿಕ ಪರಿಸ್ಥಿತಿ ಹದಗೆಟ್ಟಿದೆ" ಎಂದ ಮಲ್ಹೋತ್ರಾ, ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷ, ಗಗನಕ್ಕೇರಿರುವ ಇಂಧನ ಬೆಲೆಗಳು ಮತ್ತು ಸತತವಾಗಿ ಉಂಟಾಗುತ್ತಿರುವ ಪೂರೈಕೆ ಸರಪಳಿಯ ವ್ಯತ್ಯಯಗಳನ್ನು ಇದಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.
► ಆರ್‌ಬಿಐ ರೆಪೊ ದರ ಹೆಚ್ಚಿಸದೇ ಇರುವುದೇತಕೆ?
ಆರ್‌ಬಿಐ ಈ ನಿರ್ಧಾರವನ್ನು ಪ್ರಕಟಿಸಿರುವ ಪ್ರಸ್ತುತ ಸಂದರ್ಭದಲ್ಲಿ, ನೀತಿ ನಿರೂಪಕರು ಅತ್ಯಂತ ಕಠಿಣವಾದ ಸಮತೋಲನವನ್ನು ಕಾಯ್ದುಕೊಳ್ಳಬೇಕಾದ ಸವಾಲನ್ನು ಎದುರಿಸುತ್ತಿದ್ದಾರೆ.
ಒಂದೆಡೆ, ದೇಶದ ಹಣದುಬ್ಬರವು ನಿಯಂತ್ರಣದಲ್ಲಿದ್ದು, ಕೇಂದ್ರ ಬ್ಯಾಂಕ್ ಹೊಂದಿರುವ ಗುರಿಗಿಂತ ಕಡಿಮೆ ಮಟ್ಟದಲ್ಲಿದೆ. ಮತ್ತೊಂದೆಡೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಜಾಗತಿಕ ರಾಜಕೀಯ ಉದ್ವಿಗ್ನತೆಯು ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಾಗುವ ಅಪಾಯವನ್ನು ತಂದೊಡ್ಡಿವೆ.
ಸಂಜಯ್ ಮಲ್ಹೋತ್ರಾ ಅವರ ಪ್ರಕಾರ, ಜಾಗತಿಕ ಪೂರೈಕೆ ವ್ಯವಸ್ಥೆಯ ಮೇಲಾಗಿರುವ ಆಘಾತದ ಪರಿಣಾಮವು ದೇಶೀಯ ಮಾರುಕಟ್ಟೆಯ ಬೆಲೆಗಳ ಮೇಲೆ ಸದ್ಯಕ್ಕೆ ಸೀಮಿತವಾಗಿದೆ. ಜಾಗತಿಕ ಮಟ್ಟದಲ್ಲಿ ಆಘಾತ ಉಂಟಾಗಿದ್ದರೂ, ದೇಶೀಯ ಬೆಲೆಗಳ ಮೇಲಿನ ಅದರ ಒಟ್ಟಾರೆ ಪ್ರಭಾವ ಸೀಮಿತವಾಗಿರುವುದರಿಂದ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ನಮ್ಮ ನಿಗದಿತ ಗುರಿಗಿಂತ ಕೆಳಗೇ ಉಳಿದಿದೆ.
ಏತನ್ಮಧ್ಯೆ, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಅವಧಿಯಲ್ಲಿ ಹಣದುಬ್ಬರವು ತನ್ನ ಸಹನೀಯ ಮಿತಿಯ ಗರಿಷ್ಠ ಮಟ್ಟಕ್ಕೆ ಹತ್ತಿರವಾಗಬಹುದು ಎಂದು ಕೇಂದ್ರ ಬ್ಯಾಂಕ್ ಎಚ್ಚರಿಸಿದೆ.
ಪ್ರಸ್ತುತ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ಒತ್ತಡಗಳ ಪರಿಣಾಮವು ನಾಲ್ಕನೇ ತ್ರೈಮಾಸಿಕದಿಂದ ಕಡಿಮೆಯಾಗಲಿದೆ ಎಂದು ಆರ್‌ಬಿಐ ನಿರೀಕ್ಷಿಸಿದೆ. ಆದರೆ, ಈ ಬೆಲೆ ಏರಿಕೆಯ ಬಿಸಿ ದೇಶದ ಇಡೀ ಆರ್ಥಿಕತೆಯ ಇತರ ವಲಯಗಳಿಗೂ ವ್ಯಾಪಕವಾಗಿ ಹರಡಬಹುದು ಎಂಬ ಆತಂಕ ಬ್ಯಾಂಕನ್ನು ಕಾಡುತ್ತಿದೆ.
"ನಿರೀಕ್ಷೆಗಳು ಮತ್ತು ವೇತನಗಳ ಮೇಲಾಗುವ ದ್ವಿತೀಯ ಹಂತದ ಪರಿಣಾಮಗಳಿಂದಾಗಿ ಹಣದುಬ್ಬರವು ಸಾರ್ವತ್ರಿಕವಾಗಿ ಎಲ್ಲೆಡೆ ಹರಡುವ ಸ್ಪಷ್ಟ ಸಾಧ್ಯತೆಯಿದೆ. ಹೀಗಾಗಿ ಇದರ ಮೇಲೆ ತೀವ್ರ ನಿಗಾ ಇಡುವ ಅಗತ್ಯವಿದೆ" ಎಂದು ಮಲ್ಹೋತ್ರಾ ಹೇಳಿದ್ದಾರೆ.
► ಪ್ರಮುಖ ಆತಂಕವಾಗಿ ಹೊರಹೊಮ್ಮಿದ ಮಧ್ಯಪ್ರಾಚ್ಯ ಸಂಘರ್ಷ
ಆರ್‌ಬಿಐ ಗವರ್ನರ್ ಅವರ ಇಡೀ ಹೇಳಿಕೆಯಲ್ಲಿ ಪ್ರಮುಖವಾಗಿ ಎದ್ದುಕಂಡ ವಿಷಯವೆಂದರೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಸೃಷ್ಟಿಯಾಗಿರುವ ಭಾರೀ ಅನಿಶ್ಚಿತತೆ. ವ್ಯಾಪಾರ ಮಾರ್ಗಗಳು, ಪೂರೈಕೆ ಸರಪಳಿಗಳು ಮತ್ತು ಇಂಧನ ಮಾರುಕಟ್ಟೆಗಳಲ್ಲಿ ಉಂಟಾಗಿರುವ ವ್ಯತ್ಯಯಗಳಿಂದಾಗಿ ಜಾಗತಿಕ ಆರ್ಥಿಕತೆಯು ತೀವ್ರ ಅನಿಶ್ಚಿತತೆಯನ್ನು ಎದುರಿಸುತ್ತಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
ಗಣನೀಯವಾಗಿ ಹೆಚ್ಚಾಗಿರುವ ಇಂಧನ ಬೆಲೆಗಳು ಮತ್ತು ಪೂರೈಕೆ ಸರಪಳಿಯ ಅಡೆತಡೆಗಳು ಇಡೀ ವಿಶ್ವದಾದ್ಯಂತ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ. ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ರಾಜತಾಂತ್ರಿಕ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮುನ್ನೋಟದ ಮೇಲೆ ಕಾರ್ಮೋಡದಂತೆ ಮುಸುಕಿದೆ. ತೀವ್ರವಾಗಿ ಏರುತ್ತಿರುವ ಇಂಧನ ಬೆಲೆಗಳು ಮತ್ತು ಜಾಗತಿಕ ಪೂರೈಕೆ ಸರಪಳಿಯ ವ್ಯತ್ಯಯಗಳು ಆರ್ಥಿಕ ಚಟುವಟಿಕೆಗಳಿಗೆ ನಿರಂತರವಾಗಿ ಅಡ್ಡಿಪಡಿಸುತ್ತಿವೆ"ಎಂದು ಮಲ್ಹೋತ್ರಾ ಹೇಳಿದ್ದಾರೆ.
ಈ ಸಂಘರ್ಷ ಇನ್ನು ಎಷ್ಟು ದಿನ ಮುಂದುವರಿಯಬಹುದು ಮತ್ತು ಜಾಗತಿಕ ವ್ಯಾಪಾರ ಹಾಗೂ ಇಂಧನ ಮಾರುಕಟ್ಟೆಗಳ ಮೇಲೆ ಇದು ಎಷ್ಟು ತೀವ್ರವಾದ ಪರಿಣಾಮ ಬೀರಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲದ ಕಾರಣ, ಮುಂಬರುವ ದಿನಗಳಲ್ಲಿ ಅನಿಶ್ಚಿತತೆ ಅತ್ಯಂತ ಹೆಚ್ಚಾಗಿರಲಿದೆ ಎಂದು ಆರ್‌ಬಿಐ ಎಚ್ಚರಿಕೆ ನೀಡಿದೆ.
► ಹೆಚ್ಚಾಗುತ್ತಿದೆ ಆರ್ಥಿಕ ಬೆಳವಣಿಗೆಯ ಮೇಲಿನ ಅಪಾಯಗಳು
ಹಣದುಬ್ಬರವು ಸದ್ಯದ ಆತಂಕವಾಗಿದ್ದರೂ, ಆರ್‌ಬಿಐ ದೇಶದ ಆರ್ಥಿಕ ಬೆಳವಣಿಗೆಗೆ ಎದುರಾಗಬಹುದಾದ ಅಪಾಯಗಳ ಕುರಿತು ಕೂಡ ಎಚ್ಚರಿಸಿದೆ.
ಗಗನಕ್ಕೇರಿರುವ ಇಂಧನ ಬೆಲೆಗಳು ಮತ್ತು ಪೂರೈಕೆ ಕೊರತೆಗಳು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲು ಆರಂಭಿಸಿವೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
ಸಂಜಯ್ ಮಲ್ಹೋತ್ರಾ ಅವರ ಪ್ರಕಾರ, ದೇಶೀಯ ಬೇಡಿಕೆಯು ಸ್ಥಿರವಾಗಿದ್ದು, ಉತ್ಪಾದನಾ ಮತ್ತು ಸೇವಾ ವಲಯಗಳೆರಡೂ ನಿರಂತರವಾಗಿ ವಿಸ್ತರಣೆಯಾಗುತ್ತಿವೆ. ಆದರೆ ಆರ್ಥಿಕತೆಯ ಕೆಲವು ನಿರ್ದಿಷ್ಟ ವಲಯಗಳಲ್ಲಿ ಬೆಳವಣಿಗೆಯ ವೇಗ ಕೊಂಚ ತಗ್ಗುತ್ತಿರುವುದರ ಆರಂಭಿಕ ಮುನ್ಸೂಚನೆಗಳನ್ನು ಕೆಲವು ಪ್ರಮುಖ ಆರ್ಥಿಕ ಸೂಚಕಗಳು ತೋರಿಸುತ್ತಿವೆ.
ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿ ಮತ್ತು ಪೂರೈಕೆ ಸರಪಳಿಯ ವ್ಯತ್ಯಯಗಳಿಂದಾಗಿ ಹಣದುಬ್ಬರ ಹಾಗೂ ಆರ್ಥಿಕ ಬೆಳವಣಿಗೆಯ ಮುನ್ನೋಟ ಎರಡೂ ಇನ್ನೂ ಅನಿಶ್ಚಿತವಾಗಿಯೇ ಉಳಿದಿವೆ ಎಂದು ಆರ್‌ಬಿಐ ನಂಬಿದೆ.
"ಈ ಸಂಘರ್ಷದ ಅವಧಿ ಮತ್ತು ತೀವ್ರತೆ, ಅದರ ಇತರ ಪರಿಣಾಮಗಳ ವ್ಯಾಪ್ತಿ ಹಾಗೂ ಪೂರೈಕೆ ಸರಪಳಿಗಳು ಮರಳಿ ಸಹಜ ಸ್ಥಿತಿಗೆ ಬರುವ ವೇಗದ ಕುರಿತು ತೀವ್ರ ಅನಿಶ್ಚಿತತೆ ಇದೆ. ಈ ಕಾರಣದಿಂದಾಗಿ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯ ಮೂಲಭೂತ ಅಂದಾಜುಗಳಿಗೆ ಗಣನೀಯ ಅಪಾಯಗಳಿವೆ ಎಂಬುದು ವಿತ್ತೀಯ ನೀತಿ ಸಮಿತಿಯ ಅಭಿಪ್ರಾಯವಾಗಿದೆ" ಎಂದು ಮಲ್ಹೋತ್ರಾ ತಿಳಿಸಿದ್ದಾರೆ.
►ಮುಂಗಾರು ಮತ್ತು ಎಲ್ ನಿನೋ ಆತಂಕ
ಜಾಗತಿಕ ವಿದ್ಯಮಾನಗಳ ಹೊರತಾಗಿ, ಆರ್‌ಬಿಐ ದೇಶೀಯ ಮಾರುಕಟ್ಟೆಯ ಅಪಾಯಗಳ ಮೇಲೂ ಸೂಕ್ಷ್ಮ ನಿಗಾ ಇರಿಸಿದೆ.
ದೇಶದಲ್ಲಿ ಈ ಬಾರಿ ನೈಋತ್ಯ ಮುಂಗಾರು ವಾಡಿಕೆಗಿಂತ ಕಡಿಮೆ ಇರಲಿದೆ ಎಂಬ ಮುನ್ಸೂಚನೆ ಹಾಗೂ 'ಎಲ್ ನಿನೋ' ಪರಿಸ್ಥಿತಿ ಸೃಷ್ಟಿಯಾಗಬಹುದಾದ ಸಾಧ್ಯತೆಗಳ ಕುರಿತು ಕೇಂದ್ರ ಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ.
ದುರ್ಬಲ ಮುಂಗಾರು ದೇಶದ ಕೃಷಿ ಉತ್ಪಾದನೆ ಮತ್ತು ಆಹಾರ ಪದಾರ್ಥಗಳ ಬೆಲೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದು ಹಣದುಬ್ಬರ ಮತ್ತಷ್ಟು ಹೆಚ್ಚಾಗಲು ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ.
ವಾಡಿಕೆಗಿಂತ ಕಡಿಮೆ ಇರಲಿರುವ ನೈಋತ್ಯ ಮುಂಗಾರಿನ ಮುನ್ಸೂಚನೆ ಮತ್ತು ಎಲ್ ನಿನೋ ಪ್ರಭಾವದಿಂದಾಗಿ ಆಹಾರ ಪದಾರ್ಥಗಳ ಬೆಲೆಗಳ ಮುನ್ನೋಟವೂ ಸದ್ಯಕ್ಕೆ ಅನಿಶ್ಚಿತವಾಗಿದೆ ಎಂದು ಗವರ್ನರ್ ಹೇಳಿದ್ದಾರೆ.
ಇದೇ ಕಾರಣಗಳಿಗಾಗಿ ನೀತಿ ನಿರೂಪಕರು ಬಡ್ಡಿದರಗಳ ವಿಷಯದಲ್ಲಿ ಯಾವುದೇ ತರಾತುರಿಯ ನಿರ್ಧಾರ ಕೈಗೊಳ್ಳದೆ, ಅತ್ಯಂತ ಜಾಗರೂಕತೆಯ ನಿಲುವನ್ನು ಮುಂದುವರಿಸಿದ್ದಾರೆ.
► ಆರ್‌ಬಿಐ ನಿರ್ಧಾರದ ಅರ್ಥವೇನು?
ರೆಪೊ ದರವನ್ನು ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿಯಲ್ಲಿ ಮುಂದುವರಿಸುವ ಮೂಲಕ, ಆರ್‌ಬಿಐ ಯಾವುದೇ ಆತುರದ ಅಥವಾ ಆಕ್ರಮಣಕಾರಿ ಕ್ರಮಕ್ಕೆ ಮುಂದಾಗದೆ ಸ್ಥಿರತೆಗೆ ಆದ್ಯತೆ ನೀಡಿದೆ.
ಒಂದು ವೇಳೆ ಬಡ್ಡಿದರವನ್ನು ಹೆಚ್ಚಿಸಿದ್ದರೆ, ಅದು ರೂಪಾಯಿ ಮೌಲ್ಯ ಕುಸಿಯದಂತೆ ಬೆಂಬಲ ನೀಡಲು ಮತ್ತು ಹಣದುಬ್ಬರದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತಿತ್ತು. ಆದರೆ, ಅದೇ ಸಮಯದಲ್ಲಿ ಅದು ಉದ್ಯಮಿಗಳು ಹಾಗೂ ಗ್ರಾಹಕರ ಸಾಲದ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸುತ್ತಿತ್ತು.
ಮತ್ತೊಂದೆಡೆ, ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಹಣದುಬ್ಬರದ ಅಪಾಯಗಳು ಹೆಚ್ಚಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯಂತೂ ತೀರಾ ದೂರದ ಮಾತಾಗಿತ್ತು.
ಕೇಂದ್ರ ಬ್ಯಾಂಕಿನ ಈ ನಿರ್ಧಾರದಿಂದಾಗಿ ಮುಂಬರುವ ದಿನಗಳಲ್ಲಿ ಸಾಲದ ಮೇಲಿನ ಬಡ್ಡಿದರಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಆಗುವ ಸಾಧ್ಯತೆ ಇಲ್ಲ. ಇದು ಸಾಲಗಾರರಿಗೆ ಸದ್ಯದ ಮಟ್ಟಿಗೆ ನಿರಾಳತೆ ನೀಡಿದೆ. ಇದರ ಜೊತೆಗೆ, ಜಾಗತಿಕ ವಿದ್ಯಮಾನಗಳು ಯಾವ ತಿರುವು ಪಡೆದುಕೊಳ್ಳಲಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲು ಕೇಂದ್ರ ಬ್ಯಾಂಕ್‌ಗೆ ಹೆಚ್ಚಿನ ಸಮಯಾವಕಾಶ ಸಿಕ್ಕಂತಾಗಿದೆ. ಆರ್‌ಬಿಐ ಸದಾ ಜಾಗರೂಕತೆಯಿಂದ ಇರಲಿದ್ದು, ಇನ್ನು ಮುಂದೆ ಬರುವ ಆರ್ಥಿಕ ದತ್ತಾಂಶಗಳ ಆಧಾರದ ಮೇಲೆಯೇ ಮುಂದಿನ ಕ್ರಮ ಕೈಗೊಳ್ಳಲಿದೆ
"ಹಣದುಬ್ಬರ ಹೆಚ್ಚಾಗುವ ಅಪಾಯಗಳು ತೀವ್ರಗೊಂಡಿದ್ದರೂ, ಈ ಕುರಿತು ಮತ್ತಷ್ಟು ಸ್ಪಷ್ಟತೆ ಬರುವವರೆಗೆ ಕಾಯುವುದು ಸೂಕ್ತ ಎಂದು ವಿತ್ತೀಯ ನೀತಿ ಸಮಿತಿ ಭಾವಿಸಿದೆ," ಎಂದು ಮಲ್ಹೋತ್ರಾ ಹೇಳಿದ್ದಾರೆ.
ಸದ್ಯದ ಮಟ್ಟಿಗೆ ಕೇಂದ್ರ ಬ್ಯಾಂಕ್ ನೀಡುತ್ತಿರುವ ಸಂದೇಶ ಸ್ಪಷ್ಟವಾಗಿದೆ. ದೇಶದಲ್ಲಿ ಹಣದುಬ್ಬರ ಸದ್ಯಕ್ಕೆ ನಿಯಂತ್ರಣದಲ್ಲಿದೆ. ಆದರೆ ಕಚ್ಚಾ ತೈಲ ಬೆಲೆ ಏರಿಕೆ, ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಹವಾಮಾನ ವೈಪರೀತ್ಯದ ಅಪಾಯಗಳು ಅನಿಶ್ಚಿತತೆಯನ್ನು ಹೆಚ್ಚಿಸಿವೆ. ಈ ಸವಾಲುಗಳ ಕುರಿತು ಒಂದು ಸ್ಪಷ್ಟ ಚಿತ್ರಣ ಸಿಗುವವರೆಗೂ, ಯಾವುದೇ ಬದಲಾವಣೆ ಮಾಡದೆ ಸದ್ಯದ ಸ್ಥಿತಿಯನ್ನೇ ಕಾಯ್ದುಕೊಳ್ಳಲು ಆರ್‌ಬಿಐ ನಿರ್ಧರಿಸಿದೆ.

