ಪೆರ್ಲ: ಕನ್ನಡ ನಾಡು-ನುಡಿಗಾಗಿ ಅನನ್ಯ ಸೇವೆಸಲ್ಲಿಸಿ ಅಗಲಿದ ಮಾ.ಭ.ಪೆರ್ಲ ಮತ್ತು ತೆಂಕುತಿಟ್ಟು ಯಕ್ಷಗಾನ ಭಾಗವತಿಕೆಯ ಯುಗಪುರುಷ ದಿ.ಬಲಿಪ ನಾರಾಯಣ ಭಾಗವತರ ಸಂಸ್ಮರಣೆಯ ಜೊತೆಗೆ ವಿಶೇಷ ತಾಳಮದ್ದಳೆ ನವೆಂಬರ್ 1ರಂದು ಪೆರ್ಲದಲ್ಲಿ ನಡೆಯಲಿದೆ.
ಇಲ್ಲಿನ ಭಾಲಭಾರತಿ ವಿದ್ಯಾಕೇಂದ್ರ(ಬಲಿಪ ಭವನ ಪೆರ್ಲ)ದಲ್ಲಿ ನ.1ರಂದು ಮಧ್ಯಾಹ್ನ 2.30ರಿಂದ ನಡೆಯುವ ಸಮಾರಂಭದಲ್ಲಿ ತೆಂಕುತಿಟ್ಟಿನ ಸಮಕಾಲೀನ ಹಿರಿಯ ಭಾಗವತ, ಬಲಿಪ ನಾರಾಯಣ ಭಾಗವತರು ಅಧ್ಯಕ್ಷತೆ ವಹಿಸುವರು. `ಕಣಿಪುರ' ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪದಕ ಎಂ.ನಾ.ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಮಾರಂಭದಲ್ಲಿ ದಿ.ಬಲಿಪ ನಾರಾಯಣರ ಭಾಗವತರ ಬಗ್ಗೆ ಬಲಿಪ ಪ್ರತಿಷ್ಠಾನದ ಉಪಾಧ್ಯಕ್ಷ ಕೋಟೆ ರಾಮಭಟ್ ಸಂಸ್ಮರಣಾ ಭಾಷಣ ಮಾಡುವರು. ಅಗಲಿದ ಸಾಹಿತಿ, ಕಥೆಗಾರ, ಸಮಾಜ ಸೇವಕ ಮಾ.ಭ.ಪೆರ್ಲರ ಬಗ್ಗೆ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ ಸಂಸ್ಮರಣಾ ಭಾಷಣ ಮಾಡುವರು.
ಸಮಾರಂಭದಲ್ಲಿ ತೆಂಕುತಿಟ್ಟು ಯಕ್ಷಗಾನದ ದಶಾವತಾರಿ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರಿಗೆ ಬಲಿಪ ಪ್ರಶಸ್ತಿ ಪ್ರದಾನವಾಗಲಿದೆ. ತೆಂಕುತಿಟ್ಟಿನ ಪ್ರಾತಿನಿಧಿಕ ಕಲಾವಿದರಾದ ಗೋವಿಂದ ಭಟ್ಟರು ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತರಾದರೂ, ತೆಂಕಣ ತವರಿನಲ್ಲಿ ಬಲಿಪ ಪ್ರಶಸ್ತಿ ಪಡೆಯುತ್ತಿರುವುದು ಇದೇ ಪ್ರಥಮ.
ಸಮಾರಂಭದ ಬಳಿಕ ದಿ.ಬಲಿಪ ನಾರಾಯಣ ಪ್ರತಿಷ್ಠಾನ ಪೆರ್ಲ ಮತ್ತು ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೊಡು, ಯಕ್ಷಸ್ನೇಹಿ ಬಳಗ ಪೆರ್ಲ ಸಹಯೋಗದಲ್ಲಿ ತಾಳಮದ್ದಳೆ ನಡೆಯಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ನಾರಾಯಣ ಭಾಗವತರು, ಬಲಿಪ ಪ್ರಸಾದ ಭಟ್, ಸತೀಶ ಪುಣಿಂಚಿತ್ತಾಯ ಪೆರ್ಲ ಮತ್ತು ಚೆಂಡೆ-ಮದ್ದಳೆಯಲ್ಲಿ ಅನೂಪ್ ಸ್ವರ್ಗ, ಶ್ರೀಧರ ಎಡಮಲೆ ಪಾಲ್ಗೊಳ್ಳುವರು. ಅರ್ಥಧಾರಿಗಳಾಗಿ ಕೋಟೆ ರಾಮ ಭಟ್, ನಾರಾಯಣ ಶಾಸ್ತ್ರಿ ಕೊಲ್ಲೆಂಕಾನ, ಶೇಣಿ ವೇಣುಗೋಪಾಲ ಭಟ್, ನಾರಾಯಣ ಮೂಲಡ್ಕ ಭಾಗವಹಿಸುವರು.

