ಕುಂಬಳೆ: ಕುಂಬಳೆ ಪಂಚಾಯತಿಯ ಕಿದೂರಿನಲ್ಲಿ ಬರ್ಡ್ ಫೆಸ್ಟ್ 2019 ನ್ನು ನವೆಂಬರ್ 9 ಹಾಗೂ 10 ರಂದು ಹಮ್ಮಿಕೊಳ್ಳಲಾಗಿದೆ. ಕಾಸರಗೋಡಿನ ಪಕ್ಷಿಗ್ರಾಮ ವೆಂದು ಪ್ರಸಿದ್ದವಾದ ಕಿದೂರು ಮೂರನೇ ಆವೃತ್ತಿಯ ಪಕ್ಷಿ ಹಬ್ಬಕ್ಕಾಗಿ ಸಜ್ಜಾಗುತ್ತಿದೆ. ಈಗಾಗಲೇ ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಗುಜರಾತಿನ ಪಕ್ಷಿ ನಿರೀಕ್ಷಕರು ಎರಡು ದಿನಗಳ ಕಾರ್ಯಕ್ರಮಕ್ಕಾಗಿ ನೋಂದಾವಣೆ ನಡೆಸಿದ್ದಾರೆ. ಶೀಲಂಕಾದ ರಾಷ್ಟ್ರ ಪಕ್ಷಿಯೂ, ಗ್ರಾಮೀಣ ಭಾರತದಲ್ಲಿ ಅಪರೂಪವಾಗಿರುವ ಕೇಸರಿ ಕುತ್ತಿಗೆಯ ಹಸಿರು ಪಾರಿವಾಳಗಳು ಸಾಮಾನ್ಯವಾಗಿ ಕಂಡುಬರುವ ಕಿದೂರು ಗ್ರಾಮದಲ್ಲಿ ಇದುವರೆಗೆ 158 ಬಾನಾಡಿಗಳನ್ನು ಪಕ್ಷಿ ನಿರೀಕ್ಷಕರು ದಾಖಲಿಸಿದ್ದಾರೆ. ಶಿರಿಯ ನದಿ,ಕಾಜೂರು ಪಳ್ಳ, ಕಿರು ಅರಣ್ಯ ಹಾಗೂ ವಿಸ್ತಾರವಾದ ಮುರಕಲ್ಲು ಪ್ರದೇಶದಲ್ಲಿ ಪಕ್ಷಿಗಳಿಗೆ ಧಾರಾಳ ನೀರು ಹಾಗೂ ಆಹಾರ ಲಭ್ಯವಿರುವುದೇ ಗ್ರಾಮದ ಪಕ್ಷಿ ವೈವಿಧ್ಯತೆಗೆ ಕಾರಣವಾಗಿದೆ.
ಕಿದೂರು ಕುಂಟಂಗೇರಡ್ಕದ ರಾಜೀವ್ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಯಸ್.ಕೆ.ಪಿ. ಫ್ರೆಂಡ್ಸ್ ಕ್ಲಬ್ ಸಹಕರಿಸಲಿದೆ. ಕುಂಬಳೆ ಗ್ರಾಮ ಪಂಚಾಯತಿ ಜೈವ ವೈವಿಧ್ಯ ಸಮಿತಿ, ಕೇರಳ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಕಾಸರಗೋಡು ಪಕ್ಷಿ ಪ್ರೇಮಿ ತಂಡದ ನೇತೃತ್ವದಲ್ಲಿ ಬರ್ಡ್ ಫೆಸ್ಟ್ ನಡೆಯಲಿದೆ.


