ಬದಿಯಡ್ಕ: ಗಾಂಧೀಜಿಯವರ ವ್ಯಕ್ತಿತ್ವದ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಅವರ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತ,ಅನುಸರಣೀಯ ಎಂದು ಕಾಸರಗೋಡು ತಾಲೂಕು ಗ್ರಂಥಾಲಯ ಕೌನ್ಸಿಲ್ ಕಾರ್ಯದರ್ಶಿ ಪಿ.ದಾಮೋದರನ್ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ಗುರುವಾರ ಜರಗಿದ ಕಾರ್ಯಕ್ರಮದಲ್ಲಿ ಗ್ರಂಥಾಲಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತರನ್ನು ಗೌರವಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ತಿಳಿಸಿದ ಅವರು ಗಾಂಧೀಜಿಯವರ ಚಿತ್ರ ಬರೆಯುವುದು ಸುಲಭ. ಆದರೆ ಅವರ ಜೀವನ ಚರಿತ್ರೆಯನ್ನು ಅರಗಿಸುವುದು ಕಷ್ಟ. ಅದು ವಿಶಾಲ ಸಮುದ್ರದಂತೆ ಎಂದರು. ಗಾಂಧೀಜಿಯವರ ತತ್ವವಾದ ಗ್ರಾಮ ಸೇವೆಯ ಹೆಸರನ್ನು ಒಳಗೊಂಡಿರುವ ಈ ಗ್ರಂಥಾಲಯವು ಉತ್ತಮವಾದ ಕಾರ್ಯಗಳನ್ನು ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಖಾದಿ ಮಂಡಳಿಯ ಸಹಭಾಗಿತ್ವದಲ್ಲಿ ಕೇರಳ ರಾಜ್ಯ ಗ್ರಂಥಾಲಯ ಕೌನ್ಸಿಲ್‍ನ ಯೋಜನೆಯಂತೆ ಗಾಂಧೀಜಿಯವರ 150ನೆಯ ಜನ್ಮ ವರ್ಷಾಚರಣೆಯ ಅಂಗವಾಗಿ ಗ್ರಂಥಾಲಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತರಾದ ವೈ.ಎಸ್ ಕೇಶವ ಶರ್ಮ, ಪಿ.ವೈ ದೇರಣ್ಣ ರೈ, ಡಿ.ನಾರಾಯಣ ಭಟ್, ಕೆ.ನರಸಿಂಹ ಭಟ್ ಅವರನ್ನು ಖಾದಿ ಬಟ್ಟೆ, ಪುಸ್ತಕಗಳನ್ನು ಕೊಟ್ಟು ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ವೈ.ಎಸ್ ಕೇಶವ ಶರ್ಮ ಮತ್ತು ಡಿ.ನಾರಾಯಣ ಭಟ್ ಅವರು ಗ್ರಂಥಾಲಯದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡು ಕೃತಜ್ಞತೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ಕೆ.ನರಸಿಂಹ ಭಟ್ ಮಾತನಾಡಿ ಗ್ರಂಥಾಯ ಕೌನ್ಸಿಲ್‍ನ ಯೋಜನೆಯನ್ನು ಶ್ಲಾಘಿಸಿ ಹಿರಿಯರು ಹಾಕಿ ಕೊಟ್ಟ ಮೇಲ್ಪಂಕ್ತಿಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಭರವಸೆಯಿತ್ತರು.
ಗ್ರಂಥಾಲಯದ ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಡಾ.ವೇಣುಗೋಪಾಲ್ ಕಳೆಯತ್ತೋಡಿ ವಂದಿಸಿದರು.


