ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲುದ್ದೇಶಿಸಿದ ಅನ್ನಛತ್ರಕ್ಕೆ ಭೂಮಿಪೂಜೆ ಹಾಗೂ ಶಿಲಾನ್ಯಾಸವನ್ನು ಶ್ರೀ ಕ್ಷೇತ್ರದ ತಂತ್ರಿವರ್ಯ ವರ್ಕಾಡಿ ಗಣೇಶ ತಂತ್ರಿಯವರು ಗಣ್ಯ ಅತಿಥಿಗಳ ಸಹಭಾಗಿತ್ವದೊಂದಿಗೆ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುದ್ಕಾಡಿ ನಾರಾಯಣ ರೈ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಸಂಜೀವ ಶೆಟ್ಟಿ ಎಂ. ಮೊಟ್ಟೆಕುಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದಲ್ಲಿ ಇದುವರೆಗೆ ಆದ ಕಾಮಗಾರಿಗಳು ಮತ್ತು ಇನ್ನು ಆಗಬೇಕಾಗಿರುವ ಕಾಮಗಾರಿಗಳ ಬಗ್ಗೆ ವಿವರಣೆಯನ್ನು ನೀಡಿದರು. ತಂತ್ರಿವರ್ಯ ವರ್ಕಾಡಿ ಗಣೇಶ ತಂತ್ರಿಗಳು ಆಶೀರ್ವಚನವನ್ನು ನೀಡಿ, ದೇವರ ಇಚ್ಛೆ ಇದ್ದರೆ ಮಾತ್ರ ದೇವಸ್ಥಾನಗಳ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿದೆ. ಸಂಪತ್ತು ಇದ್ದವರಿಗೆಲ್ಲ ದೇವರ ಸೇವೆಗೆ ಅದನ್ನು ವಿನಿಯೋಗಿಸಲು ಆಗುವುದಿಲ್ಲ. ದೇವಸ್ಥಾನ, ದೇವರು ಮತ್ತು ನಮ್ಮ ಮಧ್ಯೆ ಸೇತುವೆಯಂತೆ ವರ್ತಿಸುವ ಭಕ್ತಾದಿಗಳೂ ಪ್ರಧಾನ್ಯತೆಯನ್ನು ಪಡೆಯುತ್ತಾರೆ. ಹಿಂದೂ ಧರ್ಮದಲ್ಲಿ ಅನ್ನದಾನಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಭಕ್ತಿಯಿಂದ ಅಮ್ಮನೆಡೆಗೆ ಆಗಮಿಸುವ ಭಕ್ತಾದಿಗಳ ಹಸಿವನ್ನು ನೀಗಿಸಿದರೆ ಮಾತೆಯು ಸಂತೋಷದಿಂದ ನಮ್ಮನ್ನು ಅನುಗ್ರಹಿಸುತ್ತಾಳೆ ಎಂದು ಅವರು ತಿಳಿಸಿದರು.
ಕಾಸರಗೋಡಿನ ಉದ್ಯಮಿ ಶ್ರೀಕೃಷ್ಣ ಹಾರ್ಡ್‍ವೇರ್ಸ್‍ನ ಸುರೇಶ್ ಬಟ್ಟಂಪಾರೆ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಮತ್ತು ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸೇವಾ ಸಮಿತಿಯ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಆನುವಂಶಿಕ ಮೊಕ್ತೇಸರ ಕೃಷ್ಣ ಅಮ್ಮಣ್ಣಾಯ ಪಾವೂರು, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ, ಕಾಮಗಾರಿಯ ಅಭಿಯಂತರ ಗೋವಿಂದರಾಜ್, ನಿವೃತ್ತ ಪೆÇಲೀಸ್ ಅಧಿಕಾರಿ ಸದಾಶಿವ ರೈ ಬೆಳಿಂಜ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರುಗಳಾದ ಐತಪ್ಪ ಮವ್ವಾರು, ರಾಮಪ್ಪ ಮಂಜೇಶ್ವರ ಮತ್ತು ಸೇವಾ ಸಮಿತಿಯ ಹಿರಿಯ ಸದಸ್ಯರಾದ ಅನಂತ ಭಟ್ ಗೋಸಾಡ ಶುಭಾಶಂಸನೆಗೈದರು. ಕ್ಷೇತ್ರ ಪರಿಸರದ ಪುಟಾಣಿ ಮಕ್ಕಳು ಪ್ರಾರ್ಥನೆಯನ್ನು ಹಾಡಿದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾಯದರ್ಶಿ ಪ್ರಭಾಕರ ರೈ ಎಂ. ಮಠದಮೂಲೆ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರೀಶ್ ನಾರಂಪಾಡಿ ವಂದಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ನಾರಾಯಣ ಗೋಸಾಡ ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಿತು.


