ತಿರುವನಂತಪುರ: ಕೇರಳದಲ್ಲಿ ಕರೊನಾ ವೈರಸ್‍ನ ಹೊಸ ಪ್ರಕರಣ ಶುಕ್ರವಾರ ಪತ್ತೆಯಾಗಿದ್ದು, ವೈರಸ್ ಬಾಧಿತರ ಸಂಖ್ಯೆ 19ಕ್ಕೇರಿದೆ. ಗುರುವಾರ ವಿದೇಶದಿಂದ ಕೇರಳಕ್ಕೆ ಬಂದ ಮೂವರಲ್ಲಿ ಕೊರೊನಾ ವೈರಸ್ ಪತ್ತೆಯಾಘಿತ್ತು. ದುಬಾಯಿಯಿಂದ ಆಗಮಿಸಿದ ಕಣ್ಣೂರು ನಿವಾಸಿ, ಕತಾರ್‍ನಿಂದ ಆಗಮಿಸಿದ ತೃಶ್ಯೂರ್ ನಿವಾಸಿ ಹಾಗೂ ಇಟೆಲಿಯಿಂದ ಆಗಮಿಸಿದ ತಿರುವನಂತಪುರ ನಿವಾಸಿಯಲ್ಲಿ ಸೋಂಕು ಪತ್ತೆಯಾಗಿತ್ತು. ವೈರಸ್ ಬಗ್ಗೆ ಜನತೆ ಆತಂಕಪಡದೆ, ಮುಂಜಾಗ್ರತೆ ಪಾಲಿಸಬೇಕು. ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿರುವುದಾಗಿ ಆರೋಗ್ಯ ಖಾತೆ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 249ಮಂದಿಯನ್ನು ನಿಗಾವಹಿಸಲಾಗುತ್ತಿದೆ. ಇವರಲ್ಲಿ 239ಮಂದಿಯನ್ನು ಅವರ ಮನೆಗಳಲ್ಲಿ ಹಾಗೂ ಹತ್ತು ಮಂದಿಯನ್ನು ಆಸ್ಪತ್ರೆಗಳಲ್ಲಿರಿಸಿ ನಿಗಾವಹಿಸಲಾಗುತ್ತಿದೆ. ವಿಶ್ವದ ವಿವಿಧ ದೇಶಗಳಿಂದ ಆಗಮಿಸಿದವರನ್ನು ನಿಗಾವಹಿಸಲಾಗುತ್ತಿದೆ. ವಿದೇಶದಿಂದ ಆಗಮಿಸುವವರು ಜಿಲ್ಲಾ ಕರೊನಾ ಕಂಟ್ರೋಲ್ ಸೆಲ್ ಅಥವಾ ಇತರ ನಿಗದಿತ ಕೇಂದ್ರಗಳಲ್ಲಿ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲೆಯ ಕರೊನಾ ಪ್ರತಿರೋಧ ಚಟುವಟಿಕೆಗಳ ಅವಲೋನಾ ಸಭೆ ಮಾರ್ಚ್ 14ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಲಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು, ಗ್ರಾಪಂ ಅಧ್ಯಕ್ಷರು. ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುವರು.
ರಾಜ್ಯದಲ್ಲಿ ಒಟ್ಟು 5468 ಮಂದಿ ಮೇಲೆ ನಿಗಾಯಿರಿಸಲಾಗುತ್ತಿದೆ. ಇವರಲ್ಲಿ 271ಮಂದಿಯನ್ನು ಆಸ್ಪತ್ರೆಯಲ್ಲಿರಿಸಿ ನಿಗಾವಹಿಸಲಾಗುತ್ತಿದೆ. ಒಟ್ಟು 1715ಮಂದಿಯ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ಇದರಲ್ಲಿ 1132 ವರದಿ ಋಣಾತ್ಮಕವಾಘಿದೆ. ಉಳಿದ ವರದಿ ಇನ್ನಷ್ಟೆ ಲಭಿಸಬೇಕಾಗಿದೆ.
ಮದ್ಯ ಮಾರಾಟ ತಡೆಗೆ ಆಗ್ರಹ:
ಈ ಮಧ್ಯೆ ಕರೊನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯದಲ್ಲಿ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ಕಾಂಗ್ರೆಸ್ ಮುಖಂಡ ವಿ.ಎಂ ಸುಧೀರನ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಬೀವರೇಜಸ್ ಮದ್ಯಮಾರಾಟಕೇಂದ್ರ ಹಾಗೂ ಬಾರ್‍ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಟ್ಟುಸೇರುತ್ತಿದ್ದು, ವೈರಸ್ ಹರಡಲು ಇದು ಪ್ರಮುಖ ಕೇಂದ್ರಗಳಾಗುವ ಸಾಧ್ಯತೆಯಿದೆ. ವಿಧಾನಸಭಾ ಅಧಿವೇಶನದ ಕಾಲಾವಧಿಯನ್ನೂ ಚುಟುಕುಗೊಳಿಸಿರುವ ಮುಖ್ಯಮಂತ್ರಿ, ಜನದಟ್ಟಣೆಗೆ ಕಾರಣವಾಗುವ ಬಾರ್, ಬೀವರೇಜಸ್ ಮಾರಾಟಮಳಿಗೆ ಮುಚ್ಚಲು ಮುಂದಾಗದಿರುವುದು ವಿಪರ್ಯಾಸ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದರ ಪ್ರತಿಯನ್ನು ಆರೋಗ್ಯ, ಕಂದಾಯ, ಅಬಕಾರಿ ಖಾತೆ ಸಚಿವಾಲಯಕ್ಕೂ ರವಾನಿಸಿದ್ದಾರೆ.


