ಮೆಕ್ಸಿಕೋ: ಎಲ್ ಮೆಂಚೊ ಎಂದೇ ಪರಿಚಿತನಾಗಿದ್ದ ಕುಖ್ಯಾತ ಮಾದಕವಸ್ತು ಕಳ್ಳಸಾಗಾಣಿಕೆದಾರ ನೆಮೆಸಿಯೊ ಹತ್ಯೆ ಬಳಿಕ ಆತನ ಸಹಚರರು ನಡೆಸಿದ ಪ್ರತಿದಾಳಿಯಿಂದ ಮೆಕ್ಸಿಕೊದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಎಚ್ಚರಿಕೆಯಿಂದಿರುವಂತೆ ಮೆಕ್ಸಿಕೊದಲ್ಲಿನ ಭಾರತೀಯರಿಗೆ ರಾಯಭಾರಿ ಕಚೇರಿಯು ಸಲಹೆಯನ್ನು ನೀಡಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೆಕ್ಸಿಕೊದಲ್ಲಿನ ಭಾರತೀಯ ರಾಯಭಾರಿ ಕಚೇರಿ, ಮೆಕ್ಸಿಕೋದಲ್ಲಿರುವ ಭಾರತೀಯರು ತಾತ್ಕಾಲಿಕವಾಗಿ ಮನೆಗಳಲ್ಲೇ ಉಳಿಯಬೇಕು, ಅನಗತ್ಯವಾಗಿ ಹೊರಗೆ ಓಡಾಡುವುದನ್ನು ತಪ್ಪಿಸಬೇಕು. ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ.
"ಭದ್ರತಾ ಕಾರ್ಯಾಚರಣೆಗಳು, ರಸ್ತೆ ತಡೆಗಳು ಮತ್ತು ಹಿಂಸಾಚಾರ ಘಟನೆಗಳ ಹಿನ್ನೆಲೆ ಜಲಿಸ್ಕೊ , ತಮೌಲಿಪಾಸ್, ಮೈಕೋಕನ, ಗೆರೆರೊ ಮತ್ತು ನ್ಯೂಯೆವೊ ಲಿಯಾನ್ ರಾಜ್ಯಗಳಲ್ಲಿರುವ ಭಾರತೀಯ ಪ್ರಜೆಗಳು ಮುಂದಿನ ಸೂಚನೆವರೆಗೆ ಮನೆಯಲ್ಲೇ ಇರಬೇಕು" ಎಂದು ಎಕ್ಸ್‌ನಲ್ಲಿನ ಪೋಸ್ಟ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯು ತಿಳಿಸಿದೆ.
"ಕಾನೂನು ಜಾರಿಗೆ ಸಂಬಂಧಿಸಿದ ಕಾರ್ಯಾಚರಣೆ ನಡೆಯುವ ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಿಕೊಳ್ಳಿ, ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನದಲ್ಲಿಡಿ, ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಹೊರಗೆ ಅನಗತ್ಯ ಸಂಚಾರ ಕಡಿಮೆ ಮಾಡಿ. ಸ್ಥಳೀಯ ಮಾಧ್ಯಮಗಳನ್ನು ಗಮನಿಸಿ. ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ತುರ್ತು ಪರಿಸ್ಥಿತಿಯಲ್ಲಿ 911ಕ್ಕೆ ಕರೆಮಾಡಿ. ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ನಿಮ್ಮ ಸ್ಥಳ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಯನ್ನು ಹಂಚಿಕೊಳ್ಳಿ" ಎಂದು ರಾಯಭಾರಿ ಕಚೇರಿಯು ಮಾಹಿತಿ ನೀಡಿದೆ.

