ಚೆನ್ನೈ: ಆಡಳಿತಾರೂಢ ಡಿಎಂಕೆ ಪಕ್ಷದ ನಾಯಕರ ವರ್ತನೆಯಿಂದ ಬೇಸತ್ತು ಜಾತ್ಯತೀತ ಪ್ರಗತಿಪರ ಮೈತ್ರಿಕೂಟದಿಂದ (ಎಸ್‌ಪಿಎ) ಹೊರಬರುತ್ತಿರುವುದಾಗಿ ತಮಿಳಗ ವಳುರಿಮೈ ಪಕ್ಷದ ಸ್ಥಾಪಕ ಟಿ. ವೇಲ್‌ಮುರುಗನ್ ಭಾನುವಾರ ತಿಳಿಸಿದ್ದಾರೆ.
ʼಡಿಎಂಕೆ ದೊಡ್ಡಣನಂತೆ ವರ್ತಿಸುತ್ತಿದೆ.
ನಮ್ಮ ಪಕ್ಷವನ್ನು ನಿರ್ಲಕ್ಷಿಸಲಾಗುತ್ತಿದೆ. ಇಂತಹ ಧೋರಣೆಯನ್ನು ಸಹಿಸುವುದಿಲ್ಲ. ನಾವು ಮೈತ್ರಿಕೂಟದಿಂದ ಹೊರನಡೆಯುವ ನಿರ್ಧಾರ ಮಾಡಿದ್ದೇವೆʼ ಎಂದು ಅವರು ಹೇಳಿದ್ದಾರೆ.
ಕಡಲೂರು ಜಿಲ್ಲೆಯ ಪನ್ರುತಿ ಶಾಸಕರೂ ಆಗಿರುವ ವೇಲ್‌ಮುರುಗನ್, ʼಸೀಟು ಹಂಚಿಕೆ ಮಾತುಕತೆ ವೇಳೆ ನಮ್ಮ ಪಕ್ಷಕ್ಕೆ ಒಂದು ಸ್ಥಾನ ನೀಡುವುದಾಗಿ ತಿಳಿಸಲಾಗಿತ್ತು. ಹೀಗಾಗಿ, ಸಾಮಾಜಿಕ ನ್ಯಾಯ ಪಾಲಿಸುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ನಾವು ಮುಂದಿಟ್ಟಿದ್ದೆವು. ಆದರೆ, ಬೇರಾವುದೇ ಪಕ್ಷಗಳ ಬಳಿ ಯಾವುದೇ ಬೇಡಿಕೆಗಳು ಇಲ್ಲದಿರುವ ಹೊತ್ತಲ್ಲಿ, ನೀವು ಮಾತ್ರ ಏಕೆ ಇಂತಹ ಬೇಡಿಕೆಗಳನ್ನು ಇಡುತ್ತಿದ್ದೀರಿ ಎಂದು ನಮ್ಮನ್ನೇ ಪ್ರಶ್ನಿಸಲಾಗಿತ್ತುʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾತ್ಯತೀತ ಸಿದ್ಧಾಂತದಲ್ಲಿ ರಾಜಿ ಇಲ್ಲ ಎನ್ನುತ್ತಲೇ ಎನ್‌ಡಿಎ ಸೇರಲ್ಲ ಎಂದ ವಿಜಯ್
ಮುಂದುವರಿದು, ʼಕನಿಷ್ಠ ಕೆಲವು ಬೇಡಿಕೆಗಳನ್ನಾದೂ ಈಡೇರಿಸುವಂತೆ ನಾನು ಸರ್ಕಾರವನ್ನು ಪದೇ ಪದೇ ಒತ್ತಾಯಿಸಿದ್ದೇನೆ. ಆದರೆ, ಡಿಎಂಕೆ ಅವನ್ನೆಲ್ಲ ನಿರ್ಲಕ್ಷಿಸಿದೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ಮುಂದಿನ ನಿರ್ಧಾರದ ಕುರಿತು ಮಾತನಾಡಿದ ಅವರು, ʼಮೈತ್ರಿ ಮಾಡಿಕೊಳ್ಳುವ ಸಂಬಂಧ ಬೇರೆ ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಆದರೆ, ಎನ್‌ಡಿಎ ಸೇರುವುದಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.

