HEALTH TIPS

ಅಸ್ಸಾಮಿ ಅಸ್ಮಿತೆ: ರಾಷ್ಟ್ರೀಯ ಪಕ್ಷಗಳಿಂದ 'ಹೈಜಾಕ್‌'

 ಗುವಾಹಟಿ: ವಿಧಾನಸಭಾ ಚುನಾವಣೆ ಎದುರಿಸಲಿರುವ ಅಸ್ಸಾಂನಲ್ಲಿ ಅಸ್ಸಾಮಿಗಳ ಪ್ರಾದೇಶಿಕ ಅಸ್ಮಿತೆಯನ್ನು ರಕ್ಷಿಸಲು ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ನಡುವೆ ಹಲವು ವರ್ಷಗಳಿಂದ ನಡೆಯುತ್ತಿರುವ ಪೈಪೋಟಿ ಕೊಂಚ ತಗ್ಗಿದಂತೆ ಕಾಣುತ್ತಿದೆ. 


ಪ್ರಾದೇಶಿಕ ರಾಜಕೀಯ ಪಕ್ಷಗಳ ಅಸ್ತಿತ್ವವಾಗಿದ್ದ ಈ ವಿಷಯವನ್ನು ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷಗಳು ಅಪಹರಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಸ್ಸಾಂ ಗಣ ಪರಿಷತ್ (ಎಜಿಪಿ) ಸೇರಿದಂತೆ ಪ್ರಮುಖ ಸಂಘಟನೆಗಳು ರಾಷ್ಟ್ರೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಸಾಗುತ್ತಿರುವುದರಿಂದ ಅಸ್ಸಾಮಿಗಳಲ್ಲಿ ಕಳವಳ ಮೂಡಿಸಿದೆ.

'ರಾಜ್ಯದಲ್ಲಿ ಪ್ರಾದೇಶಿಕತೆಯು ಹಿಂದಿನಿಂದಲೂ ಪ್ರಮುಖ ವಿಷಯವಾಗಿಯೇ ಉಳಿದಿದೆ. ಹೊರಗಿನವರ ಮತ್ತು ಅಕ್ರಮ ವಲಸಿಗರ ಬೆದರಿಕೆಗಳಿಂದ ತಮ್ಮ ಅಸ್ಮಿತೆಯನ್ನು ರಕ್ಷಿಸಿಕೊಳ್ಳಲು ಅಸ್ಸಾಮಿಗಳು ದಶಕಗಳಿಂದ ಚಿಂತಿತರಾಗಿದ್ದು, ಅದು ಈಗಲೂ ಮುಂದುವರಿದಿದೆ' ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

'ಅಸ್ಸಾಂ ಜನರ ಪ್ರಾಥಮಿಕ ಸಮಸ್ಯೆಗಳನ್ನು ರಾಷ್ಟ್ರೀಯ ಪಕ್ಷಗಳು ಹೈಜಾಕ್‌ ಮಾಡಿವೆ. ಅವುಗಳಲ್ಲಿ ಹೆಚ್ಚಿನ ಸಂಪನ್ಮೂಲ ಇರುವ ಕಾರಣ, ಇಲ್ಲಿನ ಪ್ರಾದೇಶಿಕ ಪಕ್ಷಗಳು ಚುನಾವಣೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಾಷ್ಟ್ರೀಯ ಪಕ್ಷಗಳ ಜತೆ ಕೈಜೋಡಿಸಿವೆ' ಎಂದು ಅವರು ವಿಶ್ಲೇಷಿಸಿದ್ದಾರೆ.

ಅಸ್ಸಾಂನಲ್ಲಿ ನಾಲ್ಕು ದಶಕಗಳಲ್ಲಿ ಎರಡು ಬಾರಿ ಸರ್ಕಾರ ಮುನ್ನಡೆಸಿರುವ ಅಸ್ಸಾಂ ಗಣ ಪರಿಷತ್ ಪ್ರಾದೇಶಿಕ ಪಕ್ಷಗಳಿಗೆ ಬಲವಾದ ಮಾರ್ಗ ರೂಪಿಸುವಲ್ಲಿ ವಿಫಲವಾಗಿದೆ ಎಂದು ಅವರು ದೂರುತ್ತಾರೆ.

ಅಸ್ಸಾಮಿಗಳ ಕಳವಳ:

'ಸಂಸ್ಕೃತಿ, ಭಾಷೆ ಮತ್ತು ಗುರುತಿನ ರಕ್ಷಣೆಯು ಅಸ್ಸಾಂ ಜನರಿಗೆ ಯಾವಾಗಲೂ ಕಳವಳದ ವಿಷಯವಾಗಿದೆ. ವಿಭಿನ್ನ ರಾಜಕೀಯ ವ್ಯವಸ್ಥೆಗಳು ಇವುಗಳನ್ನು ವಿಭಿನ್ನ ರೀತಿಯಲ್ಲಿ ಬಳಸಿಕೊಂಡಿವೆ' ಎಂದು ಅಂಕಣಕಾರ ಮತ್ತು ರಾಜಕೀಯ ವಿಶ್ಲೇಷಕ ಭ್ರೋಜೆನ್‌ ಡೇಕಾ ವಿಶ್ಲೇಷಿಸಿದ್ದಾರೆ.

'ಬಂಗಾಳಿ ಮಾತನಾಡುವ ಮುಸ್ಲಿಮರು, ಹೆಚ್ಚಾಗಿ ಬಾಂಗ್ಲಾದೇಶ ಮೂಲದವರು ಸ್ಥಳೀಯ ಜನರಿಗೆ ಆತಂಕ ಉಂಟು ಮಾಡಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಅದು ಪ್ರಮುಖ ಚರ್ಚಿತ ವಿಷಯವಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ಭರವಸೆಗಳನ್ನು ನೀಡಿ ಕೆಲ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಿ, ಸರ್ಕಾರಗಳನ್ನು ರಚಿಸಿವೆ' ಎಂದು ಅವರು ವಿವರಿಸಿದ್ದಾರೆ.

ಚುನಾವಣಾ ಅಸ್ತ್ರ:

'2016ರಲ್ಲಿ ಬಿಜೆಪಿಯು ಅಸ್ಸಾಮಿ ಸಮುದಾಯ, ಭೂಮಿ ಮತ್ತು ಮನೆ ವಿಷಯಗಳನ್ನು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಸ್ತಾಪಿಸಿ, ಗೆಲುವು ಸಾಧಿಸಿತು. ಇದು ಸ್ಥಳಿಯ ಗುರುತನ್ನು ಕಾಪಾಡುವ ನೇರ ಉಲ್ಲೇಖವಾಗಿತ್ತು. ಅದು 2026ರ ಚುನಾವಣೆಯಲ್ಲಿ ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಗಳನ್ನು ನೀಡುತ್ತಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.

1985 ಮತ್ತು 1996ರಲ್ಲಿ ಎರಡು ಸರ್ಕಾರ ರಚಿಸಿದ ಎಜಿಪಿಯು ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡುವ ಭರವಸೆ ನೀಡಿಯೇ ಅಧಿಕಾರಕ್ಕೆ ಬಂದಿತ್ತು ಎಂದು ನಾಗಾಂವ್‌ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ನವ ಕುಮಾರ್ ಮಹಾಂತ ನೆನಪಿಸಿಕೊಂಡಿದ್ದಾರೆ.

ಎರಡು ಅವಧಿಗೆ ಸರ್ಕಾರವನ್ನು ಮುನ್ನಡೆಸಿದ ಈ ಪ್ರಾದೇಶಿಕ ಪಕ್ಷ ಈಗ ಬಿಜೆಪಿಯ ಸಣ್ಣ ಮಿತ್ರ ಪಕ್ಷವಾಗಿದೆ. ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಈ ಪ್ರಾದೇಶಿಕ ಪಕ್ಷವು 126 ಸ್ಥಾನಗಳಲ್ಲಿ 26 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮೂಲ ಉದ್ದೇಶದಿಂದ ಸರಿಯುತ್ತಿರುವ ಎಜಿಪಿ

ಈ ವರ್ಷ ಎಜಿಪಿಯ 26 ಅಭ್ಯರ್ಥಿಗಳ ಪೈಕಿ 13 ಮಂದಿ ಮುಸ್ಲಿಮರಾಗಿದ್ದಾರೆ. ಎಜಿಪಿ ರಚನೆ ಆದಾಗಿನಿಂದಲೂ ಜಾತ್ಯತೀತ ದೃಷ್ಟಿಕೋನವನ್ನು ಹೊಂದಿದೆ ಆದರೆ ಅದು ಯಾವಾಗಲೂ ಬಂಗಾಳಿ ಮಾತನಾಡುವ ಮುಸ್ಲಿಮರಿಂದ ಅಂತರ ಕಾಯ್ದುಕೊಂಡಿದೆ. ಆದರೆ ಈ ಬಾರಿ ಅಭ್ಯರ್ಥಿಗಳಾಗಿರುವ 13 ಮಂದಿ ಮುಸ್ಲಿಮರ ಪೈಕಿ ಹಲವರು ಬಂಗಾಳಿ ಮಾತನಾಡುವರು ಆಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಭ್ರೋಜೆನ್‌ ಡೇಕಾ ವಿವರಿಸಿದ್ದಾರೆ. ಇದನ್ನು ಗಮನಿಸಿದರೆ ಎಜಿಪಿಯು ಪ್ರಾದೇಶಿಕತೆಯ ಗುರುತನ್ನು ರಕ್ಷಿಸುವ ಮೂಲ ಉದ್ದೇಶದಿಂದ ಪಕ್ಕಕ್ಕೆ ಸರಿದಂತೆ ಕಾಣುತ್ತಿದೆ ಎಂದು ಅವರು ವಿಶ್ಲೇಷಿಸುತ್ತಾರೆ. ಮತ್ತೊಂದೆಡೆ ಅಸ್ಸಾಮಿ ಜನರ ಗುರುತನ್ನು ರಕ್ಷಿಸುವ ಮಹತ್ವದ ಉದ್ದೇಶದಿಂದ ರಚನೆಯಾದ ರೈಜೋರ್‌ ದಳ ಮತ್ತು ಅಸ್ಸಾಂ ಜಾತೀಯ ಪರಿಷತ್‌ ಪಕ್ಷಗಳು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿವೆ. ಆದರೆ ಕಾಂಗ್ರೆಸ್‌ ಪಕ್ಷವು ಅಕ್ರಮ ವಲಸಿಗರ ಪರವಾಗಿದ್ದು ಅವರನ್ನು ಮತಬ್ಯಾಂಕ್‌ ಮಾಡಿಕೊಂಡಿದೆ ಎಂಬ ಆರೋಪಗಳಿವೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries