ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಸ್ತೆಯ ಪಳ್ಳತ್ತಡ್ಕ ಪ್ರದೇಶ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಮತ್ತೆ ರಾಡಿಯೆದ್ದಿದೆ. ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಸುಮರು 29ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆಪೂರ್ತಿಗೊಂಡು ಕಾಮಗಾರಿಗೆ ಚಾಲನೆ ನೀಡಿದ್ದರು, ಮಳೆಗಾಲ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷವೂ ಹೊಂಡದಿಂದ ಕೂಡಿದ ರಸ್ತೆಯಲ್ಲಿ ಕೆಸರಿನ ಸಿಂಚನದೊಂದಿಗೇ ವಾಹನಗಳು ಸಂಚಾರನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಎಡರಂಗ ಸರ್ಕಾರದ ಕಾಲಾವಧಿಯಲ್ಲೇ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಾಗಿದ್ದು, ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ಕಮಗಾರಿ ಆರಂಭ ವಿಳಂಬಗೊಂಡಿತ್ತು. ಪ್ರಸಕ್ತ ರಸ್ತೆಯಲ್ಲಿನ ಬೃಹತ್ ಹೊಂಡ ಮುಚ್ಚುವ ಕೆಲಸ ಆರಂಭಗೊಂಡಿದ್ದು, ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆಗೆ ಚೆರ್ಕಳದಿಂದ ಉಕ್ಕಿನಡ್ಕ ವರೆಗೆ ಕೊನೆಗೂ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲದಲ್ಲಿ ಎಡನೀರು, ನೆಕ್ರಾಜೆ, ಕರಿಂಬಿಲ, ಪಳ್ಳತ್ತಡ್ಕದಲ್ಲಿ ಉಂಟಾಗಿರುವ ಬೃಃತ್ ಹೊಂಡಗಳನ್ನು ಕಾಂಕ್ರೀಟು ಮಿಶ್ರಣದೊಂದಿಗೆ ಮುಚ್ಚಿ, ಚರಂಡಿ ವ್ಯವಸ್ಥೆ ಸರಿಪಡಿಸಿದಲ್ಲಿ ಮಳೆ ದೂರಾಗುತ್ತಿದ್ದಂತೆ ಡಾಂಬರೀಕರಣ ಕಾರ್ಯ ನಡೆಸುವುದು ಅಧಿಕಾರಿಗಳ ಉದ್ದೇಶವಾಗಿದೆ.
ಕಾಸರಗೋಡಿನಿಂದ ಚೆರ್ಕಳ-ಬದಿಯಡ್ಕ-ಪೆರ್ಲ ಹಾದಿಯಾಗಿ ಕರ್ನಾಟಕ್ಕೆ ಸಂಪರ್ಕ ಕಲ್ಪಿಸುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ ಶಿಥಿಲಗೊಂಡು ಹಲವು ವರ್ಷಗಳೇ ಸಂದಿದೆ.ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಂಚರಿಸಲಿರುವ ಪ್ರಮುಖ ರಸ್ತೆ ಇದಾಗಿದ್ದು, ಶಿಥಿಲ ರಸ್ತೆಯಲ್ಲಿನ ಪ್ರಯಾಣ ಚಾಲಕರು ಹಾಗೂ ಜನರಲ್ಲಿ ವ್ಯಾಪಕ ಸಮಸ್ಯೆಗೆ ಕಾರಣವಾಗಿದ್ದು, ಕಾಮಗಾರಿ ಶೀಘ್ರ ಪೂರ್ತಿಗೊಳಿಸುವ ಬಗ್ಗೆ ಚಾಲಕರು ಹಾಗೂಪ್ರಯಾಣಿಕರು ಆಶಾಭಾವನೆಯಿಂದಿದ್ದಾರೆ. ಚೆರ್ಕಳ-ಕಲ್ಲಡ್ಕ ರಸ್ತೆ ಉಕ್ಕಿನಡ್ಕ ವರೆಗಿನ ಶಿಥಿಲಾವಸ್ಥೆ ಬಗ್ಗೆ 'ವಿಜಯವಾಣಿ'ಸಮಗ್ರ ಲೇಖನದೊಂದಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಸೆಳೆದಿತ್ತು.




