ನವದೆಹಲಿ: ಗ್ರೇಟ್ ನಿಕೋಬಾರ್ ಅಭಿವೃದ್ಧಿ ಯೋಜನೆಯು ರಾಷ್ಟ್ರೀಯ ಭದ್ರತೆ ಅಥವಾ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಯಲ್ಲ; ಭಾರತದ ಅಮೂಲ್ಯ ಪರಿಸರ ಸಂಪತ್ತನ್ನು ನಾಶಪಡಿಸಿ ಖಾಸಗಿ ಹಿತಾಸಕ್ತಿಗಳಿಗೆ ಅವಕಾಶ ಕಲ್ಪಿಸುವ ಯೋಜನೆಯಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ವಿಶ್ವ ಪರಿಸರ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಅವರು, ಇತ್ತೀಚೆಗೆ ಗ್ರೇಟ್ ನಿಕೋಬಾರ್ ದ್ವೀಪಕ್ಕೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.
'ಭಾರತದ ದಕ್ಷಿಣದ ತುದಿಯಾದ ಇಂದಿರಾ ಪಾಯಿಂಟ್ ಗೆ ಭೇಟಿ ನೀಡಿದ್ದೆ. ಶತಮಾನಗಳಿಂದ ಬೆಳೆದಿರುವ ಮರಗಳ ನಡುವೆ ನಡೆದಿದ್ದೇನೆ. ಭೂಮಿಯ ಮೇಲಿನ ಅತ್ಯಂತ ಜೀವವೈವಿಧ್ಯಮಯ ಪರಿಸರ ವ್ಯವಸ್ಥೆಗಳಲ್ಲಿ ಒಂದಾದ ಹವಳದ ದಿಬ್ಬಗಳನ್ನು ಕಂಡಿದ್ದೇನೆ. ಅಲ್ಲಿನ ನಿವಾಸಿಗಳು ಹಾಗೂ ಬುಡಕಟ್ಟು ಸಮುದಾಯಗಳೊಂದಿಗೆ ಮಾತುಕತೆ ನಡೆಸಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಹಕ್ಕುಗಳ ಕಾಯ್ದೆಯನ್ನು ಉಲ್ಲಂಘಿಸಿ ಬುಡಕಟ್ಟು ಸಮುದಾಯಗಳ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಈ ದ್ವೀಪಗಳಲ್ಲಿ ಸರಕಾರದಿಂದ ಪುನರ್ವಸತಿ ಪಡೆದಿರುವ ವಸಾಹತುಗಾರರು, ಅವರಲ್ಲಿ ಹಲವರು ಮಾಜಿ ಸೈನಿಕರಾಗಿದ್ದು, ಸಮರ್ಪಕ ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗ್ರೇಟ್ ನಿಕೋಬಾರ್ ಯೋಜನೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ ಎಂಬ ಕೇಂದ್ರ ಸರಕಾರ ಮತ್ತು ಬಿಜೆಪಿ ವಾದವನ್ನು ತಳ್ಳಿಹಾಕಿರುವ ರಾಹುಲ್ ಗಾಂಧಿ, 'ಐಎನ್‌ಎಸ್ ಬಾಜ್ ನೌಕಾನೆಲೆಯ ವಿಸ್ತರಣೆಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ನೌಕಾಪಡೆಯು ಕಳೆದ ಐದು ವರ್ಷಗಳಿಂದ ವಿಸ್ತರಣೆಗೆ ಮನವಿ ಮಾಡುತ್ತಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ' ಎಂದು ಹೇಳಿದ್ದಾರೆ.
ಯೋಜನೆಯು ಟ್ರಾನ್ಸ್‌ಶಿಪ್‌ಮೆಂಟ್ ಬಂದರಿಗೆ ಸಂಬಂಧಿಸಿದೆ ಎಂಬ ವಾದವನ್ನೂ ಅವರು ಪ್ರಶ್ನಿಸಿದ್ದಾರೆ. 'ಕೇರಳದಲ್ಲಿ ಭಾರತ ಈಗಾಗಲೇ ಟ್ರಾನ್ಸ್‌ಶಿಪ್‌ಮೆಂಟ್ ಬಂದರನ್ನು ನಿರ್ಮಿಸುತ್ತಿದೆ. ಆದ್ದರಿಂದ ಗ್ರೇಟ್ ನಿಕೋಬಾರ್ ಯೋಜನೆಯ ಉದ್ದೇಶ ಅದು ಅಲ್ಲ' ಎಂದು ತಿಳಿಸಿದ್ದಾರೆ.
'ಈ ಯೋಜನೆಯ ಪರಿಣಾಮವಾಗಿ ಸುಮಾರು 1.5 ಕೋಟಿ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಅಧಿಕೃತ ನಕ್ಷೆಗಳಿಂದ ಹವಳದ ದಿಬ್ಬಗಳನ್ನು ತೆಗೆದುಹಾಕಲಾಗಿದೆ. ಸೈನಿಕರು ಮತ್ತು ಬುಡಕಟ್ಟು ಜನಾಂಗದವರನ್ನು ಸ್ಥಳಾಂತರಿಸಲಾಗುತ್ತಿದೆ. ಭಾರತದ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಹೋಟೆಲ್‌ಗಳು ಹಾಗೂ ಕ್ಯಾಸಿನೊಗಳನ್ನು ನಿರ್ಮಿಸಲು ಒಬ್ಬ ಉದ್ಯಮಿಗೆ ಅವಕಾಶ ಕಲ್ಪಿಸಲಾಗುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.
'ಎಷ್ಟೇ ಆರ್ಥಿಕ ಲಾಭ ದೊರೆತರೂ, ಮರಳಿ ಪಡೆಯಲಾಗದ ಪ್ರಕೃತಿ ಸಂಪತ್ತನ್ನು ನಾಶ ಮಾಡುವುದು ಸರಿಯಲ್ಲ ಎಂಬುದು ಯುವಜನರಿಗೆ ಅರ್ಥವಾಗಿದೆ. ಪರಿಸರ ಸಮತೋಲನ ಕಾಪಾಡುವ ಅಭಿವೃದ್ಧಿಯನ್ನು ನಾನು ಬೆಂಬಲಿಸುತ್ತೇನೆ. ಗ್ರೇಟ್ ನಿಕೋಬಾರ್ ದ್ವೀಪಗಳು ಜಗತ್ತಿನ ಅತ್ಯಂತ ಅಸಾಧಾರಣ ಸುಸ್ಥಿರ ಪ್ರವಾಸಿ ತಾಣಗಳಲ್ಲಿ ಒಂದಾಗುವ ಸಾಮರ್ಥ್ಯ ಹೊಂದಿವೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

