ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಸಂಭ್ರಮದಿಂದ ಜರಗಿತು. ಶಾಲಾ ಪ್ರಬಂಧಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನಸುಗಳ ಬೆನ್ನತ್ತಿ ಶಿಕ್ಷಣದ ಬೆಳಕನ್ನು ಅರಸಿ ಬರುವ ಯುವ ಪೀಳಿಗೆ ಬದ್ಧತೆ ಹಾಗೂ ಪರಿಶ್ರಮದಿಂದ ತಮ್ಮನ್ನು ಕಲಿಕೆಯಲ್ಲಿ ತೊಡಗಿಸಿದಲ್ಲಿ ಮಾತ್ರ ಪ್ರಬುದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮೀಂಂಜ ಗ್ರಾಮ ಪಂಚಾಯತಿ ಸದಸ್ಯ ಸಿದ್ದಿಕ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಿತ ಐಸ್ ಕ್ರೀಂ ಸಂಸ್ಥೆ ಪೋಲಾರ್ ಬೇರ್ ವತಿಯಿಂದ ಶಾಲೆಯ ವಿಜ್ಞಾನ ವಿಭಾಗಕ್ಕೆ ವಿಜ್ಞಾನ ಪರಿಕರಗಳನ್ನು ನೀಡಲಾಯಿತು. ಸಂಸ್ಥೆಯ ಸ್ಥಾಪಕ ನಿರ್ದೇಶಕ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಕಿಶೋರ್ ಕುಮಾರ್ ರೈ ಅನುಪಸ್ಥಿತಿಯಲ್ಲಿ ಅವರ ತೀರ್ಥರೂಪರಾದ ಸದಾಶಿವ ರೈ ಅವರು ಪರಿಕರಗಳನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಅವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಹೊನ್ನಕಟ್ಟೆ, ಮಿಸ್ರಿಯ, ಶಾಲಾ ಪ್ರಾಂಶುಪಾಲ ರಮೇಶ್ ಕೆ.ಎನ್. ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಮೃದುಲಾ ಸ್ವಾಗತಿಸಿ, ಕನ್ನಡ ಅಧ್ಯಾಪಕ ರಾಜಾರಾಮ ವಂದಿಸಿದರು. ಸಮಾಜ ವಿಜ್ಞಾನ ಅಧ್ಯಾಪಕ ಕಿರಣ್ ಕೆ.ಎಸ್. ನಿರೂಪಿಸಿದರು.

.jpg)
.jpg)
