ಕಾಸರಗೋಡು: 'ಜಾಗತಿಕ ತಾಪಮಾನ ಏರಿಕೆಗೆ ಮರಗಳೇ ಉತ್ತರ' ಎಂಬ ಸಂದೇಶದೊಂದಿಗೆ, ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಪರಿಸರ ಸಂರಕ್ಷಣಾ ಚಟುವಟಿಕೆಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಜಿಲ್ಲಾ ಮಿಷನ್‍ನ ಈ ವರ್ಷದ ಪರಿಸರ ದಿನಾಚರಣೆಯ ಭಾಗವಾಗಿ, 'ಮಳೆಹನಿ - ಸಾವಿರ ಕೈಗಳ ಮೂಲಕ ಸಾವಿರ ಸಸಿಗಳು' ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಐತಿಹಾಸಿಕ ಚಂದ್ರಗಿರಿ ಕೋಟೆಯ ವಠಾರದಲ್ಲಿ ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಸಸಿ ನೆಡುವ ಮೂಲಕ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ನೆರವೇರಿಸಿದರು. ಪ್ರಕೃತಿ ಸಂರಕ್ಷಣೆ ಮತ್ತು ಹಸಿರೀಕರಣದ ಗುರಿಯೊಂದಿಗೆ ಜಿಲ್ಲೆಯ ಎಲ್ಲಾ ಸಿಡಿಎಸ್‍ಗಳ ನೇತೃತ್ವದಲ್ಲಿ ಬೃಹತ್ ಸಾರ್ವಜನಿಕ ಅಭಿಯಾನದೊಂದಿಗೆ ಪರಿಸರ ಸಂರಕ್ಷಣಾ ಕಾರ್ಯ ನಡೆದುಬರಲಿದೆ.
ಶಾಲೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಹಸಿರು ಕ್ರಿಯಾ ಸೇನೆಯ ಸಹಾಯದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಪರಿಸರ ಸಂರಕ್ಷಣೆ ಬಗ್ಗೆ ಸಂದೇಶ, ಜಾಗೃತಿ ರ್ಯಾಲಿ ಮತ್ತು ಅಭಿಯಾನಗಳನ್ನು ಆಯೋಜಿಸಲಾಯಿತು. ಚೆಮ್ನಾಡು ಗ್ರಾಪಂ ಅಧ್ಯಕ್ಷೆ ಆಯೇಷಾ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿಟಿಪಿಸಿ ಕಾರ್ಯದರ್ಶಿ ಜಿಜೇಶ್ ಕುಮಾರ್ ಜೆಕೆ ಪರಿಸರ ದಿನಾಚರಣೆ ಸಂದೇಶ ನೀಡಿದರು. ಗ್ರಾಪಂ ಉಪಾಧ್ಯಕ್ಷ ದಿಲೀಪ್ ಉಣ್ಣಿಕೃಷ್ಣನ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅಜನ ಕೆ. ಉಪಸ್ಥಿತರಿದ್ದರು. ರತೀಶ್ ಕುಮಾರ್ ಸ್ವಾಗತಿಸಿದರು. ಪಂಚಾಯಿತಿಸಿಡಿಎಸ್ ಅಧ್ಯಕ್ಷೆ ಪಿ.ಭಾರ್ಗವಿ ವಂದಿಸಿದರು.



