ನವದೆಹಲಿ: ಒಮ್ಮೆ ಸಾಲಗಾರರ ಸಮಿತಿ (ಸಿಒಸಿ) ಪರಿಹಾರ ಯೋಜನೆಯನ್ನು ಅನುಮೋದಿಸಿ, ಉದ್ದೇಶ ಪತ್ರವನ್ನು (ಎಲ್‌ಒಐ) ನೀಡಿದ ನಂತರ, ಮಾತುಕತೆ ಅಥವಾ ಹಿಂಪಡೆ ಯುವಿಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯ ಮಂಡಳಿ (ಎನ್‌ಸಿಎಲ್‌ಎಟಿ) ನೀಡಿದ ಆದೇಶದ ವಿರುದ್ಧ ಒರಾಕಲ್ ಹೋಮ್ಸ್ ಟೆಕ್ಸ್‌ಟೈಲ್ಸ್ ಲಿಮಿಟೆಡ್ ಕಂಪನಿಯ ಪ್ರವರ್ತಕ ಸಂಜಯ್ ದವೆ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ವಿ ವಿಶ್ವನಾಥನ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರ ಪೀಠವು ಈ ಆದೇಶ ನೀಡಿದೆ.
ದಿವಾಳಿತನ ಮತ್ತು ದಿವಾಳಿತನ ಸಂಹಿತೆ ಕಾಯ್ದೆಯ 33ನೇ ಸೆಕ್ಷನ್, ಇಂತಹ ಅನುಮೋದನೆಗಳ ಬದ್ಧತೆ ಮತ್ತು ಬದಲಾಯಿಸಲಾಗದ ಸ್ವರೂಪವನ್ನು ಒತ್ತಿ ಹೇಳುತ್ತದೆ ಎಂದು ನ್ಯಾಯಪೀಠ ಹೇಳಿದೆ.
'ಈ ಮನವಿ ಸ್ಪಷ್ಟ ಕುತಂತ್ರವಾಗಿದ್ದು, ಇದು ಅನುಮೋದಿತ ಯೋಜನೆಯನ್ನು ರದ್ದುಗೊಳಿಸುವ ಪರೋಕ್ಷ ಪ್ರಯತ್ನ' ಎಂದು ನ್ಯಾಯಪೀಠ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.
ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗೆ ಒಳಪಡಲು ಒರಾಕಲ್‌ನ ದವೆ ಅವರು 2018ರಲ್ಲಿ ಎನ್‌ಸಿಎಲ್‌ಟಿ ಅನುಮತಿಯೊಂದಿಗೆ ಪರಿಹಾರ ಯೋಜನೆ ಸಲ್ಲಿಸಿದ್ದರು. 2021ರಲ್ಲಿ ಸಾಲಗಾರರ ಸಮಿತಿ ಇದನ್ನು ಅನುಮೋದಿಸಿತ್ತು. ಆದರೆ, ದವೆ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

