ಕಾಸರಗೋಡು: ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಈಗ ಕಾನೂನು ಹೋರಾಟವೊಂದು ಆರಂಭವಾಗಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಜಾರಿಗೆ ಬಂದಿರುವ ಮಲಯಾಳಂ ಭಾಷಾ ಕಾಯ್ದೆ-2025ರ ಸೆಕ್ಷನ್ 6ರ ಅಡಿಯಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ದೀಕ್ಷಾ, ತನಿತಾ, ಧನುಷ್, ಹರ್ಷಶ್ರೀ, ಮೊಹಮ್ಮದ್, ಶಿವಾಜಿತ್, ಮಹಮ್ಮದ್ ರಿಯಾಜ್ ಸೇರಿದಂತೆ ಏಳು ವಿದ್ಯಾರ್ಥಿಗಳು ಕೇರಳ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಕಡ್ಡಾಯ ನಿಯಮವು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮುಖ್ಯ ವಾದಗಳು ಮತ್ತು ಕೋರಿಕೆಗಳು:
ಅರ್ಜಿದಾರರ ಪರ ವಕೀಲರು, ಈ ಕಾಯ್ದೆಯು ಭಾರತದ ಸಂವಿಧಾನದ ವಿಧಿಗಳು ಸೇರಿದಂತೆ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಮತ್ತು ವಿಧಿಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ವಾದಿಸಿದ್ದಾರೆ.
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಲಯಾಳಂ ಅನ್ನು ಹೆಚ್ಚುವರಿ ಭಾಷೆಯಾಗಿ ಕಡ್ಡಾಯಗೊಳಿಸುವುದರಿಂದ ವಿನಾಯಿತಿ ನೀಡಬೇಕು ಹಾಗೂ ಅರ್ಜಿ
ಇತ್ಯರ್ಥವಾಗುವವರೆಗೆ ಅನುಷ್ಠಾನಕ್ಕೆ ಮಧ್ಯಂತರ ತಡೆಯಾಜ್ಞೆ (ಸ್ಟೇ) ನೀಡಬೇಕೆಂದು ಕೋರಿದ್ದಾರೆ.
ನ್ಯಾಯಾಲಯದ ನಡಾವಳಿ:
ಅರ್ಜಿಯ ಗಂಭೀರತೆಯನ್ನು ಪರಿಗಣಿಸಿದ ಮಾನ್ಯ ಉಚ್ಚ ನ್ಯಾಯಾಲಯದ ಮಾನ್ಯ ನ್ಯಾಯಮೂರ್ತಿ ಜಸ್ಟಿಸ್ ಬೆಚ್ಚು ಕುರಿಯನ್ ಥಾಮಸ್ ಒಳಗೊಂಡ ಏಕ ಸದಸ್ಯ ಪೀಠ ಸೋಮವಾರ ವಿಚಾರಣೆಗೆ ಸ್ವೀಕರಿಸಿದೆ. ಪ್ರತಿ ವಾದದಾರರಾದ ಕೇರಳ ರಾಜ್ಯ ಸರ್ಕಾರ ಮತ್ತು ಸಾಮಾನ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ (ಕೌಂಟರ್) ಸಲ್ಲಿಸಲು ನಿರ್ದೇಶಿಸಿದೆ. ಮಧ್ಯಂತರ ತಡೆಯಾಜ್ಞೆಯ ಮನವಿಯನ್ನು ಪರಿಗಣಿಸಲು ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಲಾಗಿದೆ.
ಅಭಿಮತ:
-ಕನ್ನಡದ ಮೇಲಿನ ಪ್ರತ್ಯಾಘಾತಗಳು ಕಳವಳಕಾರಿ. ಈ ನಿಟ್ಟಿನಲ್ಲಿ ಹೋರಾಟ, ಪ್ರತಿಭಟನೆಗಳು ನಿರಂತರವಾಗಿ ವಿವಿಧ ಕೋನಗಳಲ್ಲಿ ನಡೆಯುತ್ತಿದೆ. ಈ ಮಧ್ಯೆ ವಿದ್ಯಾರ್ಥಿಗಳು ಸಲ್ಲಿಸಿದ ಮಹತ್ವದ ರಿಟ್ ಗೆ ಅನುಕೂಲಕರವಾಗಿ ತೀರ್ಪು ಬರಲಿ ಎಂದು ಹಾರೈಸುವೆ. ಸಾಂವಿಧಾನಿಕ ಹಕ್ಕನ್ನು ಕಾಪಾಡುವಲ್ಲಿ ಉಂಟಾಗುವ ಸವಾಲುಗಳಿಗೆ ನ್ಯಾಯಾಲಯವೊಂದೇ ಅಂತಿಮ ಭರವಸೆ.
-ನ್ಯಾಯವಾದಿ ಮುರಳೀಧರ ಬಳ್ಳಿಕ್ಕುರಾಯ.
ಅಧ್ಯಕ್ಷಕರು ಕರ್ನಾಟಕ ಸಮಿತಿ.ಕಾಸರಗೋಡು.
ಹೈಲೈಟ್ಸ್:
-ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಸಾಂವಿಧಾನಿಕ ಹಕ್ಕಾಗಿದ್ದು, ಗಡಿನಾಡಿನ ಕನ್ನಡ ಮಕ್ಕಳ ಈ ಕಾನೂನು ಹೋರಾಟವು ಕಾಸರಗೋಡಿನಲ್ಲಿ ಕನ್ನಡದ ಅಸ್ತಿತ್ವ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯ್ದುಕೊಳ್ಳುವಲ್ಲಿ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಕಾಸರಗೋಡಿನ ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.

