ಕೊಲ್ಕತ್ತಾ : ಬಂಗಾಳದ ಎಲ್ಲ ಮದರಸಗಳಲ್ಲಿ ವಂದೇಮಾತರಂ ಹಾಡುವುದನ್ನು ರಾಜ್ಯ ಸರ್ಕಾರ ಕಡ್ಡಾಯಪಡಿಸಿದ ಬೆನ್ನಲ್ಲೇ, ಈ ಆದೇಶ ರದ್ದುಪಡಿಸುವಂತೆ ಕೋರಿ ಹೌರಾ ನಿವಾಸಿಯೊಬ್ಬರು ಕೊಲ್ಕತ್ತಾ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದಾರೆ.
ಹೌರಾದ ಸಂಕ್ರೈಲ್ ಮದರಸದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯ ಪೋಷಕ ಎಂದು ಹೇಳಿಕೊಂಡಿರುವ ಮುಹಮ್ಮದ್ ಮಹತಬುದ್ದೀನ್ ಲಷ್ಕರ್ ಎಂಬುವವರು ಈ ದಾವೆ ಸಲ್ಲಿಸಿದ್ದಾರೆ.
ಮದರಸ ಶಿಕ್ಷಣದ ನಿರ್ದೇಶನಾಲಯ ಮೇ 19ರಂದು ನೀಡಿದ ಆದೇಶವು ಸಂವಿಧಾನದ 14ನೇ ವಿಧಿ (ಸಮಾನತೆಯ ಮೂಲಭೂತ ಹಕ್ಕು), 19(1)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕು) ಮತ್ತು 25(1) (ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕು) ಉಲ್ಲಂಘಿಸುತ್ತದೆ ಎಂದು ಅವರು ದೂರಿದ್ದಾರೆ.
ಭಾರತ ಸರ್ಕಾರ ಜನವರಿ 28ರಂದು ನೀಡಿದ ಮಾರ್ಗಸೂಚಿಯ ಅನ್ವಯ, ಶಾಲೆಗಳಲ್ಲಿ ದಿನ ಕಾರ್ಯ ಆರಂಭವಾಗುವ ವೇಳೆ ವಂದೇಮಾತರಂ ಅನ್ನು ಸಾಮೂಹಿಕವಾಗಿ ಹಾಡಬಹುದಾಗಿದೆ. ಆದ್ದರಿಂದ ವಂದೇಮಾತರಂ ಹಾಡುವ ಕ್ರಮ ಐಚ್ಛಿಕವೇ ವಿನಃ ಕಡ್ಡಾಯವಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ದೋಷಪೂರಿತ ಆದೇಶದಲ್ಲಿ ವಿವೇಚನಾತ್ಮಕ ಕ್ರಮವನ್ನು ಕಾನೂನುಬಾಹಿರವಾಗಿ ಕಡ್ಡಾಯಪಡಿಸಲಾಗಿದೆ ಎಂದು ಅವರು ವಾದಿಸಿದ್ದಾರೆ.
"ಅಧಿಕೃತ ವಂದೇಮಾತರಂ ಗೀತೆಯಲ್ಲಿ ಹಿಂದೂ ದೇವತೆಗಳಾದ ದುರ್ಗಾದೇವಿ ಮತ್ತು ಕಮಲ ಎಂಬ ಉಲ್ಲೇಖವಿದ್ದು, ದೇವಸ್ಥಾನಗಳಲ್ಲಿ ಸಲ್ಲಿಸುವ ಧಾರ್ಮಿಕ ಪ್ರಾರ್ಥನೆಯ ಉಲ್ಲೇಖವಿದೆ. ಇದು ಇಸ್ಲಾಮಿಕ್ ನಂಬಿಕೆಗೆ ವಿರುದ್ಧವಾದದ್ದು" ಎಂದು ಅವರು ವಿಶ್ಲೇಷಿಸಿದ್ದಾರೆ.

